ಮಹಾತ್ಮ ಗಾಂಧಿ ನರೇಗಾ ಯೋಜನೆ ಪುನರ್ ಸ್ಥಾಪಿಸಲು ಕಾಂಗ್ರೆಸ್ ಮತ್ತು ಕಾರ್ಮಿಕ ವಲಯ ಉಗ್ರ ಹೋರಾಟ ಮಾಡಲಿದೆ: ಜಾನಿ ಕೆ.ಪಿ.

ಹೊಸ ತಲೆಮಾರುಗಳ ನೆನಪಿನಲ್ಲಿ ಕೂಡಾ ಉಳಿಯದಂತೆ ಗಾಂಧೀಜಿಯನ್ನು ಅಳಿಸುವ ಷಡ್ಯಂತ್ರ ನಡೆಯುತ್ತಿದೆ.

ಜಾನಿ ಕೆ. ಪಿ.

ಜ.6: MGNREGA ಯೋಜನೆ ಕಾಂಗ್ರೆಸ್ಸಿನ ಕನಸಿನ ಕೂಸು, ಇದು ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯ ಮತ್ತು ಸರ್ವೋದಯ ಆಶಯಗಳಿಂದ ಪ್ರೇರಣೆಗೊಂಡು ಗ್ರಾಮದ ಅಭಿವೃದ್ಧಿ ಮತ್ತು ಗ್ರಾಮೀಣಭಾಗದ ಸರ್ವಜನರ ಉದಯ ಅಥವಾ ಸರ್ವಜನರ ಅಭಿವೃದ್ಧಿ ಎಂಬ ಆಶಯಕ್ಕೆ ಪೂರಕವಾಗಿ ತಯಾರಾಗಿರುವ ಯೋಜನೆ. ಈ ಯೋಜನೆಯನ್ನು ರದ್ದುಗೊಳಿಸುವ ಮೂಲಕ ಕೇಂದ್ರದ ಬಿಜೆಪಿ ಸರಕಾರ ದೇಶದ 12 ಕೋಟಿ 16 ಸಾವಿರ ಮನ್ರೇಗಾ ಕಾರ್ಮಿಕರ ಹೊಟ್ಟೆಗೆ ಹೊಡೆಯುವ ಪ್ರಯತ್ನ ಮಾಡುತ್ತಿದೆ ಎಂದು ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸದಸ್ಯರು ಹಾಗೂ ಕೆ.ಪಿ.ಸಿ.ಸಿ. ಪ್ರಚಾರ ಸಮಿತಿಯ ಮುಖ್ಯ ಸಂಯೋಜಕರು ಆದ ಜಾನಿ ಕೆ.ಪಿ. ದೂರಿದರು.

ಜಾನಿ ಕೆ.ಪಿ ಯವರು ಇಂದು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ವಿಶೇಷವಾಗಿ ಉದ್ಯೋಗ ಖಾತರಿ ಯೋಜನೆಯಲ್ಲಿ 51.6 ಶೇಕಡಾ ಮಹಿಳಾ ಕಾರ್ಮಿಕರು ಇದ್ದು ಕಳೆದ ಇಪತ್ತು ವರ್ಷಗಳಿಂದ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ಈ ಉದ್ಯೋಗ ಖಾತರಿ ಯೋಜನೆ ಸಹಕಾರಿಯಾಗಿತ್ತು.
ಇದೀಗ ಬಿಜೆಪಿ ಸರಕಾರ ಮಹಿಳೆಯರ, ವಿಶೇಷವಾಗಿ ಗ್ರಾಮೀಣ ಭಾಗದ ಕಟ್ಟಡ ಕಾರ್ಮಿಕರು , ಕೃಷಿ ಕೂಲಿ ಕಾರ್ಮಿಕರ ಬದುಕಿಗೆ ಕೊಳ್ಳಿಯಿಡುವ ಕೆಲಸ ಮಾಡಿದೆ ಎಂದರು .

ಮನ್ರೇಗಾ ಯೋಜನೆ ದಲಿತರು, ಆದಿವಾಸಿಗಳು, ಅವರು ಕಾಡಿನಲ್ಲಿ ವಾಸವಿದ್ದರೆ ಕಾಡಿನಲ್ಲೇ ಕೆಲಸ ಮಾಡಲು ಅವಕಾಶ ಕೊಟ್ಟು ಕೆಲಸ ಇಲ್ಲದ ಎಲ್ಲಾ ಪ್ರಜೆಗಳಿಗೂ ತಾವು ವಾಸವಿರುವಲ್ಲೇ ಕೆಲಸ ಖಾತ್ರಿ ಪಡಿಸುವ ಯೋಜನೆಯಾಗಿತ್ತು .

ಪ್ರಸ್ತುತ ಆ ಯೋಜನೆಯನ್ನು ರದ್ದು ಮಾಡಿ ವಿ. ಬಿ. ಜಿರಾಂಜಿ ಎನ್ನುವ ಹೊಸ ಯೋಜನೆ ಜಾರಿಗೆ ತಂದಿದೆ. ಈ ಕಾನೂನಿನ ಅನುಸಾರ ಈ ಹಿಂದೆ ಉದ್ಯೋಗ ಖಾತರಿ ಯೋಜನೆಗೆ ತಗಲುವ ಹಣವನ್ನು ಕೇಂದ್ರ ಸರಕಾರವೇ ಪಾವತಿ ಮಾಡಬೇಕಾಗಿತ್ತು. ಆದರೆ, ಈಗಿನ ಕಾನೂನಿನಲ್ಲಿ ಕೇಂದ್ರ ಸರಕಾರ 60 ಶೇಕಡಾ ಮತ್ತು ರಾಜ್ಯ ಸರಕಾರ 40 ಶೇಕಡಾ ಪಾಲು ಹಾಕುವಂತೆ ಕಾನೂನು ತಯಾರು ಮಾಡಿರುತ್ತದೆ. ಇದು ಮೊದಲೇ ಜಿ.ಎಸ್.ಟಿ ಪಾಲು ಕೊಡದೇ ಸತಾಯಿಸುವ ರಾಜ್ಯಕ್ಕೆ ಮತ್ತೆ ಹೊಡೆತಕೊಂಟ್ಟಂತಾಗಿದೆ.

ಮೊದಲು ಆಯಾ ಗ್ರಾಮದ ಜನರೇ ಕುಳಿತು ಏನೆಲ್ಲಾ ಕೆಲಸಗಳು ಆಗಬೇಕು ಎಂದು ತೀರ್ಮಾನಿಸುವ ಹಕ್ಕು ಇತ್ತು. ಆದರೆ, ಈಗ ಅಧಿಕಾರಿಗಳೇ ತೀರ್ಮಾನ ಮಾಡುವಂತೆ ಕಾನೂನನ್ನು ಮಾಡಿರುತ್ತಾರೆ.

ಹಾಗೇ ಕಾರ್ಮಿಕರು ವಾಸವಿರುವಲ್ಲೇ ಕೆಲಸ ಇರಬೇಕೆಂದಿಲ್ಲ. ಬೇರೆಲ್ಲೋ ದೂರದೂರಿನಲ್ಲಿ ಕೆಲಸ ಇದ್ದರೆ ಅಲ್ಲಿಗೆ ಹೋಗಿ ಮಾಡಬೇಕೆನ್ನುವಂತೆ ಈಗಿನ ಕಾನೂನು ಮಾಡಲಾಗಿದ್ದು ಇದರಿಂದ ಮಹಿಳೆಯರು ಮತ್ತು ಅನೇಕ ಕಾರ್ಮಿಕರು ಕೆಲಸ ಕಳಕೊಳ್ಳುವ ಸ್ತಿತಿ ನಿರ್ಮಾಣ ಆಗಲಿದೆ ಎಂದರು.

ಒಂದು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕಾರಣವಾಗುತ್ತಿತ್ತು.

ಉದಾಹರಣೆಗೆ ರಸ್ತೆ ಕಾಂಕ್ರೀಟ್, ಚರಂಡಿ ನಿರ್ಮಾಣ, ತಡೆಗೋಡೆ ನಿರ್ಮಾಣ, ಶೌಚಾಲಯ ನಿರ್ಮಾಣ, ವೈಯಕ್ತಿಕ ಕೆಲಸದಲ್ಲಿ ಮನೆ ನಿರ್ಮಾಣ ಮಾಡಿದರೆ 90 ದಿನಗಳ ಮಾನವ ಶ್ರಮದ ಕೂಲಿ ಸುಮಾರು 33 ಸಾವಿರ ರೂ ಒಬ್ಬರಿಗೆ ಪಡಕೊಳ್ಳುವ ಅವಕಾಶ, ಕುರಿ ಹಟ್ಟಿ, ಕೋಳಿ ಗೂಡು, ಹಂದಿ ಗೂಡು, ಕೃಷಿಚಟುವಟಿಕೆ ಹೀಗೆ ಒಂದು ಗ್ರಾಮದ ಸರ್ವತೋಮುಖ ಪ್ರಗತಿಗೆ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮೂಲಕ ಸಾಧ್ಯವಾಗುತ್ತಿತ್ತು. ಆದರೆ, ಈ ಯೋಜನೆಯನ್ನು ರದ್ದು ಗೊಳಿಸುವ ಮೂಲಕ ಮಹಾತ್ಮ ಗಾಂಧಿಯವರ ಗ್ರಾಮದ ಅಭಿವೃದ್ಧಿ ಮೂಲಕ ಸರ್ವರ ಅಭಿವೃದ್ಧಿ ಎನ್ನುವ ಆಶಯಕ್ಕೆ ಕೊಳ್ಳಿಯಿಡುವ ಕೆಲಸ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮಾಡಿದೆ.

ಕಳೆದ 11 ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಸುಮಾರು 30 ಕ್ಕಿಂತ ಹೆಚ್ಚು ಕಾಂಗ್ರೆಸ್ ಸರಕಾರದ ಯೋಜನೆಗಳ ಹೆಸರು ಬದಲಿಸಿ ಅದನ್ನು ತಮ್ಮ ಯೋಜನೆ ಎಂದು ತೋರಿಸುವ ಪ್ರಯತ್ನ ಮಾಡಿತು. ಬಿಜೆಪಿ ಈವರೆಗೆ ಹೆಸರು ಬದಲಿಸಿದ್ದಲ್ಲದೆ ಜನಪರವಾದ ಯಾವ ಯೋಜನೆಯನ್ನು ಕೂಡಾ ಮಾಡಿಲ್ಲ ಮತ್ತು 2014 ರ ವರೆಗಿನ ಎಲ್ಲಾ ಪ್ರಧಾನಿಗಳು ಸೇರಿ ಮಾಡಿದ ದೇಶದ ಸಾಲ ಕೇವಲ 54 ಲಕ್ಷ ಕೋಟಿ ಆಗಿತ್ತು. ಆ ಸಾಲದಲ್ಲಿ ಈ ದೇಶದ ಶಿಕ್ಷಣ ಸಂಸ್ಥೆಗಳು, ರಸ್ತೆ, ಸೇತುವೆಗಳು, ಆಸ್ಪತ್ರೆಗಳು, ರೈಲ್ವೇ, ಸಾರಿಗೆ, ಹೀಗೆ 2014 ರ ಮೊದಲು ಇದ್ದ ಎಲ್ಲ ಸಂಸ್ಥೆಗಳನ್ನು ಮತ್ತು ಮಂಗಳ ಗ್ರಹಕ್ಕೆ ಉಪಗ್ರಹ ಕಳಿಸು ಕೆಲಸವನ್ನು ಮಾಡಲಾಗಿತ್ತು. ಆದರೆ ಕಳೆದ 11 ವರ್ಷಗಳಲ್ಲಿ ದೇಶದ ಸಾಲ ಬರೋಬ್ಬರಿ 200 ಲಕ್ಷ ಕೋಟಿ ದಾಟಿದೆ. ಮಾತ್ರವಲ್ಲ, ದೇಶದ ಜನ ಬಳಸುವ ದೈನಂದಿನ ಬಳಕೆಯ ವಸ್ತುಗಳ ಬೆಲೆ ಕಡಿಮೆಯಾಗಿಲ್ಲ, ಅದು ಗಗನಕ್ಕೇರಿದೆ. ಡೀಸೆಲ್‌, ಪೆಟ್ರೋಲ್, ಗ್ರಹಬಳಕೆಯ ಗ್ಯಾಸ್ ಯಾವುದೂ ಕಡಿಮೆಯಾಗಿಲ್ಲ, ಎಲ್ಲವೂ ದುಬಾರಿಯಾಗಿದೆ. ಮಾತ್ರವಲ್ಲ ದೇಶ ಅಭಿವೃದ್ಧಿ ಆಗಿದೆಯೋ ಇಲ್ಲವೋ ಎಂದು ನೋಡಲು ಜನಸಾಮಾನ್ಯನಿಗೆ ಅರ್ಥವಾಗದ ಜಿಡಿಪಿ, ಮತ್ತೊಂದು ವಿಷಯಗಳ ಬಗ್ಗೆ ನೋಡಬೇಕಾಗಿಲ್ಲ. 2014 ರಲ್ಲಿ 62 ರುಪಾಯಿಗೆ ಸಿಗುತ್ತಿದ್ದ ಒಂದು ಡಾಲರ್ ಇವತ್ತು ಒಂದು ಡಾಲರಿಗೆ 91 ರೂಪಾಯಿ ಕೊಡಬೇಕಾಗುತ್ತಿದೆ. ಇದರ ಅರ್ಥ ಭಾರತದ ಆರ್ಥಿಕತೆ ಯಾವ ಮಟ್ಟಕ್ಕೆ ಕುಸಿದಿದೆ ಎನ್ನುವುದನ್ನು ತೋರಿಸುತ್ತದೆ.

ಆದ್ದರಿಂದ ಈಗಿನ ಕೇಂದ್ರ ಸರಕಾರ ಜನರ ಬದುಕಿನೊಂದಿಗೆ ಆಟವಾಡುತ್ತಿದ್ದು, ಇದರ ವಿರುದ್ಧ ಗ್ರಾಮ ಮಟ್ಟದಿಂದಲೇ ಚಳವಳಿ ಆರಂಭಿಸಬೇಕಿದೆ. ಕಾಂಗ್ರೆಸ್ ಖಂಡಿತಾ ಈ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಮರಳಿ ಸ್ಥಾಪಿಸುವವರೆಗೂ ಹೋರಾಟ ಮಾಡಲಿದೆ. ಇದಕ್ಕೆ ಕಾರ್ಮಿಕ ವಲಯವೂ ಕೈ ಜೋಡಿಸಲಿದೆ ಎಂದರು .

ಪತ್ರಿಕಾ ಗೋಷ್ಠಿಯಲ್ಲಿ ಕಾಂಗ್ರೆಸ್ ದ. ಕ. ಜಿಲ್ಲಾ ಅಸಂಘಟಿತ ಕಾರ್ಮಿಕರ ಪ್ರಧಾನ ಕಾರ್ಯದರ್ಶಿ ಶ್ರೀ ಜ್ಞಾನಶೀಲನ್ ರಾಜು, ಕಾಂಗ್ರೆಸ್ ತಾಲೂಕು ಅಸಂಘಟಿತ ಕಾರ್ಮಿಕರ ಅಧ್ಯಕ್ಷ ಶ್ರೀ ಮಂಜುನಾಥ್ ಕಂದಡ್ಕ, ಮಹಿಳಾ ಕಾಂಗ್ರೆಸ್ ಸಂಪಾಜೆ ವಲಯದ ಅಧ್ಯಕ್ಷೆ ಶ್ರೀಮತಿ ಲಲನ ಕೆ.ಆರ್, ಕೃಷಿ ಪತ್ತಿನ ಸಹಕಾರಿ ಸಂಘ ಸಂಪಾಜೆ ಇದರ ನಿರ್ದೇಶಕಿ ಹಾಗೂ ಕಾರ್ಮಿಕ ನಾಯಕಿ ಪ್ರಮಿಳಾ ಪೆಲ್ತಡ್ಕ, ರೈತ ನಾಯಕ ಶ್ರೀ ಮಂಜುನಾಥ್ ಮಡ್ತಿಲ, ಕಾರ್ಮಿಕ ನಾಯಕರಾದ ಶ್ರೀ ನಾಗಮುತ್ತು, ಇವರುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *