ಕೋಗಿಲು ಲೇಔಟ್ ಸ್ಲಂ ಮನೆಗಳ ಧ್ವಂಸ – ಸಿಪಿಐ(ಎಂ) ಖಂಡನೆಬಡವರ ಮನೆಗಳ ಮರು ನಿರ್ಮಾಣಕ್ಕೆ ಆಗ್ರಹ
ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ವಾಸಿಸುತ್ತಿರುವ ಬಡವರ ಮನೆಗಳನ್ನು ಏಕಾಏಕಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಧ್ವಂಸಗೊಳಿಸಿರುವುದನ್ನು ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್ವಾದಿ) ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಸಿಪಿಐ(ಎಂ) ಪಕ್ಷವು ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತದೆ.

ಕಳೆದ 25-35 ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿರುವ ಈ ಪ್ರದೇಶದ ಮತದಾರರಾಗಿರುವ ಬಡಜನರ ಮನೆಗಳನ್ನು ರಾಜ್ಯ ಸರ್ಕಾರದ ಅಧೀನದಲ್ಲಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಏಕಾಏಕಿ ಜೆ.ಸಿ.ಬಿ. ಗಳೊಂದಿಗೆ ಆಗಮಿಸಿ ಧ್ವಂಸಗೊಳಿಸಿರುವುದು ಅಮಾನವೀಯವಾಗಿದೆ. ಮನೆಗಳನ್ನು ಕಳೆದುಕೊಂಡು ಬಾದಿತರಾಗಿರುವ ಜನರು, ಮಕ್ಕಳು ಮಹಿಳೆಯರು ಹಾಗೂ ಹಿರಿಯ ನಾಗರಿಕರು ಊಟ-ನೀರಿಗಾಗಿ ಪರದಾಡುವಂತಾಗಿದೆ. ರಾಜ್ಯ ಸರ್ಕಾರದ ಬಡವರ ವಿರೋಧಿ ಈ ಕ್ರಮವನ್ನು ಸಿಪಿಐ(ಎಂ) ತೀವ್ರವಾಗಿ ಖಂಡಿಸುತ್ತದೆ.

ಘಟನೆಯ ಸ್ಥಳಕ್ಕೆ ಡಿಸೆಂಬರ್ 26ರಂದು ಸಿಪಿಐಎಂ ನ ನಿಯೋಗವು ಭೇಟಿ ಕೊಟ್ಟಿತು. ನಿಯೋಗದಲ್ಲಿ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಗೋಪಾಲಕೃಷ್ಣ ಹರಳಹಳ್ಳಿ. ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಹುಳ್ಳಿ ಉಮೇಶ್, ಜಿಲ್ಲಾ ಸಮಿತಿ ಸದಸ್ಯರಾದ ಹನುಮಂತರಾವ್ ಹವಲ್ದಾರ್ ಇದ್ದರು. ಸಿಪಿಐ(ಎಂ) ಮುಖಂಡರು ಸಂತ್ರಸ್ಥರಿಗೆ ಸಾಂತ್ವಾನ ಮತ್ತು ಧೈರ್ಯವನ್ನು ಹೇಳಿದರು.

ಕಳೆದ 30 ವರ್ಷಗಳಿಂದ ವಾಸಿಸುತ್ತಿರುವ ಈ ಪ್ರದೇಶದ ಜನರನ್ನು ಒಕ್ಕಲೆಬ್ಬಿಸಲು ಸರ್ಕಾರ ಅನುಸರಿಸಿದ ಕ್ರಮವು ಹಲವು ಅನುಮಾನಗಳಿಗೆ ಕಾರಣಾವಾಗಿದೆ. ಬಡ-ದಲಿತ-ಅಲ್ಪಸಂಖ್ಯಾತ-ಫಕೀರ್ ಸಮುದಾಯಕ್ಕೆ ಸೇರಿದ 140 ಮನೆಗಳಿಗೆ 2017-18ರಲ್ಲಿ ಬೆಂಗಳೂರು ಉತ್ತರ ತಾಲೂಕಿನ ತಹಶೀಲ್ದಾರರು ತಾತ್ಕಾಲಿಕ ಆದೇಶ ನೀಡಿ ವಾಸಿಸಲು ಮನೆ ಕಟ್ಟಿಕೊಳ್ಳಲು ಅವಕಾಶ ನೀಡಿದ್ದಾರೆ. ಈ ಪ್ರದೇಶದ ಮನೆಗಳಿಗೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ನೀಡಲಾಗಿದ್ದು, ಸದರಿ ಪ್ರದೇಶದ ಜನರು ವಿದ್ಯುತ್ ಬಿಲ್ ಪಾವತಿದಾರರಾಗಿರುತ್ತಾರೆ. ಮುಖ್ಯವಾಗಿ ಇಲ್ಲಿ ವಾಸಿಸುತ್ತಿರುವ ಜನರಿಗೆ ಪೂರ್ವ ಮಾಹಿತಿಯನ್ನು ನೀಡದೇ, ಯಾವುದೇ ನೋಟೀಸ್ ನೀಡದೇ ಜನರು ವಾಸಿಸುತ್ತಿರುವ ಮನೆಗಳನ್ನು ಬೆಳ್ಳಂಬೆಳಿಗ್ಗೆ ಏಕಾಏಕಿ ಧ್ವಂಸಗೊಳಿಸಿರುವುದು ಕಾನೂನುಬಾಹಿರವಾಗಿದೆ ಎಂದು ಡಾ.ಕೆ.ಪ್ರಕಾಶ್, ರಾಜ್ಯ ಕಾರ್ಯದರ್ಶಿ – ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ. ಇವರು ತಿಳಿಸಿದರು

