ಬೆಂಗಳೂರು : ಜಿಲ್ಲಾ ಪಂಚಾಯತ್ ,ಮತ್ತು ತಾಲ್ಲೂಕು ಪಂಚಾಯತ್ ಚು ನಾವಣೆಗೆ ಕೂಡಲೇ ಸಿದ್ದರಾಗಿ ಕಾರ್ಯಕರ್ತರಿಗೆ ಡಿ.ಕೆ ಶಿವಕುಮಾರ್ ಕರೆ

ಜಿಲ್ಲಾ ,ಮತ್ತು ತಾಲೂಕು ಪಂಚಾಯತ್ ಚು ನಾವಣೆಗೆಇದೀಗ ಕೂಡಿ ಕಾಲ ಬಂದಂತೆ ಕಾಣುತ್ತಿದೆ.
ಚುನಾವಣೆ ನಡೆಸಲು ಅಗತ್ಯ ಸಿದ್ಧತೆಗಳನ್ನು ಏಪ್ರಿಲ್‌ 2026 ರ ಒಳಗೆ ಪೂರ್ಣಗೊಳಿಸಲು ಕಳೆದ ಸಂಪುಟ ಸಭೆ ನಿರ್ಧರಿಸಿತ್ತು.

ಇದೀಗ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಮಹತ್ವದ ಸೂಚನೆ ನೀಡಿದ್ದಾರೆಂದು ತಿಳಿದು ಬಂದಿದೆ. 2 ರಿಂದ 3 ತಿಂಗಳೊಳಗೆ ಚುನಾವಣೆ ನಡೆಸಬೇಕು ಎಂದು ಡಿಕೆಶಿ ಸೂಚನೆ ನೀಡಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಎರಡು ಮೂರು ತಿಂಗಳಿನಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಗಳನ್ನು ನಡೆಸಬೇಕಿದೆ.‌ ಅದಕ್ಕೂ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಇದರ ಬಗ್ಗೆ ತಿಳಿಸಿದ್ದು, ಮೀಸಲಾತಿ ವಿಚಾರವಾಗಿ ನ್ಯಾಯಾಲಯಗಳಲ್ಲಿ ಇರುವ ಕಂಟಕಗಳನ್ನು ಆದಷ್ಟು ಬೇಗನೇ ಬಗೆಹರಿಸಿ ಇನ್ನೆರಡು ತಿಂಗಳಲ್ಲಿ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ರಾಜ್ಯದ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ 2016ರ ಏಪ್ರಿಲ್‌ನಲ್ಲಿ ಚುನಾವಣೆ ನಡೆದಿತ್ತು. ಅಂದು ಆಯ್ಕೆಯಾಗಿದ್ದ ಸದಸ್ಯರ ಅವಧಿ 2021ರ ಏಪ್ರಿಲ್ 27 ರಂದೇ ಮುಕ್ತಾಯವಾಗಿತ್ತು. ಅವಧಿ ಪೂರ್ಣಗೊಂಡ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ ತಾಂತ್ರಿಕ ಕಾರಣಗಳಿಂದ ಚುನಾವಣೆ ನಡೆಸುವುದು ಸುಮಾರು ಐದು ವರ್ಷ ವಿಳಂಬವಾಗಿದ್ದು, 2026ರ ಬೇಸಿಗೆ ಅವಧಿ ಮುಗಿಯುವ ಮೊದಲು ಚುನಾವಣೆ ನಡೆಸಲು ಅನುಕೂಲವಾಗುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಅಗತ್ಯ ಸಹಕಾರ ನೀಡಲು ನಿರ್ಧರಿಸಲಾಗಿದೆ.

ಬೂತ್‌ ಮಟ್ಟದ ಕಾರ್ಯಕರ್ತರಿಗೆ ಅವಕಾಶ
‘ ಬೂತ್ ಮಟ್ಟದಲ್ಲಿ ಯಾರು ಕೆಲಸ ಮಾಡುತ್ತಾರೋ ಅವರಿಗೆ ಅವಕಾಶ. ಸಿದ್ದರಾಮಯ್ಯ, ಶಿವಕುಮಾರ್ ಹಿಂದೆ ತಿರುಗುತ್ತಿರುವವರಿಗೆ ಅವಕಾಶವಿಲ್ಲ‌. ಕೆಲಸ ಮಾಡಿದವರಿಗೆ ಹೆಚ್ಚು ಆದ್ಯತೆ’ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ವಿಳಂಬದ ವಿರುದ್ಧ ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‌ ಮೊರೆ ಹೋಗಿತ್ತು. ಕ್ಷೇತ್ರಗಳ ಪುನರ್‌ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಪ್ರಕ್ರಿಯೆಯನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ 2023ರ ಡಿಸೆಂಬರ್‌ನಲ್ಲೇ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿತ್ತು. ನಂತರ ಕ್ಷೇತ್ರಗಳ ಪುನರ್‌ವಿಂಗಡಣೆ ಹಾಗೂ ಸದಸ್ಯರ ಸಂಖ್ಯೆ ನಿಗದಿಪಡಿಸಲು ಸರ್ಕಾರ ರಚಿಸಿದ್ದ ಆಯೋಗದ ಶಿಫಾರಸುಗಳನ್ನು ಅಂಗೀಕರಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಅಧಿಸೂಚನೆ ಹೊರಡಿಸಿತ್ತು. ಆದರೆ, ಮೀಸಲಾತಿ ನಿಗದಿ ಅಂತಿಮಗೊಳಿಸಿರಲಿಲ್ಲ. ಸಂಪುಟದ ನಿರ್ಧಾರದೊಂದಿಗೆ ಸುದೀರ್ಘ ಅವಧಿ ನನೆಗುದಿಗೆ ಬಿದ್ದಿದ್ದ ಚುನಾವಣೆ ನಡೆಯುವುದು ಖಚಿತವಾಗಿದೆ. ಆದ್ದರಿಂದ ಇಷ್ಟು ದಿನದಿಂದ ಕಾಯುತ್ತಿದ್ದ ಕಾರ್ಯಕರ್ತರಿಗೆ ಇದೀಗ ಸಿಹಿಸುದ್ದಿ ಸಿಕ್ಕಂತಾಗಿದೆ.

Leave a Reply

Your email address will not be published. Required fields are marked *