ಸುಳ್ಯದಲ್ಲಿ ಹಲ್ಲೆ ಪ್ರಕರಣ: ಅಟೋ ಚಾಲಕ ಜಬ್ಬಾರ್ ಸಾವು, ಇಬ್ಬರು ಆರೋಪಿಗಳ ಬಂಧನ
ಸುಳ್ಯ ತಾಲ್ಲೂಕಿನಲ್ಲಿ ಕಾರ್ ಬಾಡಿಗೆಗೆ ನೀಡುವ ನೆಪದಲ್ಲಿ ವ್ಯಕ್ತಿಯನ್ನು ಕರೆದುಕೊಂಡು ಹೋಗಿ ಗಂಭೀರವಾಗಿ ಹಲ್ಲೆ ಮಾಡಿದ ಪರಿಣಾಮ ಅಟೋ ಚಾಲಕ ಅಬ್ದುಲ್ ಜಬ್ಬಾರ್ ಮೃತಪಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಲಭ್ಯವಿರುವ ಮಾಹಿತಿಯ ಪ್ರಕಾರ, ಆರೋಪಿಗಳು ಜಬ್ಬಾರ್ ಅವರನ್ನು ಅಕ್ಟೋಬರ್ 16 ರಂದು ಕಾರ್ ಬಾಡಿಗೆ ನೀಡುವ ವಿಚಾರದ ನೆಪದಲ್ಲಿ ದುಗ್ಗಲಡ್ಕ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ. ನಂತರ ಅವರನ್ನು ಸುಳ್ಯ ಕಲ್ಲುಗುಂಡಿ ಪ್ರದೇಶಕ್ಕೆ ಕರೆತಂದು ಮತ್ತೆ ಗಂಭೀರವಾಗಿ ಹಲ್ಲೆ ಮಾಡಲಾಗಿದೆ. ಹಲ್ಲೆಯ ಬಳಿಕ ಗಾಯಗೊಂಡ ಜಬ್ಬಾರ್ ಅವರನ್ನು ಮನೆಗೆ ಕಳುಹಿಸಲಾಗಿದ್ದು, ಮುಂದಿನ ದಿನ ಅವರ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟಿತು.
ಅನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ವೈದ್ಯಕೀಯ ವರದಿಯಲ್ಲಿ ಜಬ್ಬಾರ್ ಅವರ ಮೃತ್ಯು ಹಲ್ಲೆಯ ಪರಿಣಾಮವೇ ಎಂದು ದೃಢಪಟ್ಟಿದೆ.

ಮೃತನ ಪತ್ನಿಯ ದೂರು ಆಧಾರದ ಮೇಲೆ ಸುಳ್ಯ ಪೊಲೀಸರು ಪ್ರಕರಣವನ್ನು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103 (ಕೊಲೆ) ಹಾಗೂ ಸಂಬಂಧಿತ ವಿಧಿಗಳ ಅಡಿಯಲ್ಲಿ ದಾಖಲಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಕಸಬಾ ನಿವಾಸಿ ಮೊಹಮ್ಮದ್ ರಫೀಕ್ (41) ಮತ್ತು ಸಂಪಾಜೆ ನಿವಾಸಿ ಮನೋಹರ ಕೆ.ಎಸ್. (42) ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಹಲ್ಲೆಗೆ ಬಳಸಿದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
ಬಂಧಿತ ಆರೋಪಿಗಳಲ್ಲೋರ್ವ ಸಂಪಾಜೆಯ ಮನೋಹರ ಕೆ.ಎಸ್. ವರ್ಷಗಳ ಹಿಂದೆ ನಡೆದ ಸಂಪತ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಜಾಮೀನಿನ ಮೇಲೆ ಇತ್ತೀಚೆಗಷ್ಟೇ ಹೊರ ಬಂದಿದ್ದನು.

