ಯತೀಂದ್ರರಿಗೆ ಸಿ.ಎಂ ಸಿದ್ದರಾಮಯ್ಯರ ಕಡಕ್ ವಾರ್ನಿಂಗ್

ಕಾಂಗ್ರೆಸ್ ಸರಕಾರದಲ್ಲಿ ನಾಯಕತ್ವ ಬದಲಾವಣೆಯ ಕುರಿತು ಆಗಾಗ್ಗೆ ಪಕ್ಷದ ಹಿತದೃಷ್ಟಿಗೆ ವಿರುದ್ದವಾಗಿ ಮಾತನಾಡಿ ಪಕ್ಷ ಮುಜುಗರಕ್ಕೀಡಾಗುವಂತೆ ಮಾಡುವುದು ವಿದಾನಪರಿಷತ್ ಸದಸ್ಯ ಯತೀಂದ್ರರಿಗೆ ಚಾಳಿಯಾದಂತಾಗಿದೆ. ಇದರ ವಿರುದ್ದ ಸಿ.ಎಂ ಸಿದ್ದರಾಮಯ್ಯ ಪುತ್ರನಿಗೆ ಖಡಕ್ ವಾರ್ನಿಂಗ್ ಕೊಟ್ಟಿರುವ ವಿಚಾರ ಇದೀಗ ಸದ್ದು ಮಾಡುತ್ತಿದೆ.

ಪಕ್ಷದ ಹಿತದೃಷ್ಟಿಗೆ ವಿರುದ್ದವಾಗಿ ಯಾರೂ ಬಹಿರಂಗ ಹೇಳಿಕೆ ನೀಡಬಾರದು ಎಂದು ಹೈಕಮಾಂಡ್ ಸೂಚನೆ ಇದ್ದಾಗ್ಯೂ ,ಬ್ರೇಕ್ ಫಾಸ್ಟ್ , ಹಾಗೂ ಲಂಚ್ ಕಾರ್ಯಕ್ರಮಗಳೊಂದಿಗೆ ಒಂದು ಹಂತದ ಯುದ್ಧವಿರಾಮ ಘೋಷಿಸಿದ್ದ ಸಿದ್ದರಾಮಯ್ಯ & ಡಿ.ಕೆ.ಶಿ ಬಣ ಸಿ.ಎಂ ಪುತ್ರ ಯತೀಂದ್ರರ ಹೇಳಿಕೆಯಿಂದ ಎರಡೂ ಗುಂಪುಗಳು ಮತ್ತೆ ಕೆರಳುವಂತೆ ಮಾಡಿರುತ್ತದೆ.

ಎಲ್ಲವೂ ತಾತ್ಕಾಲಿಕವಾಗಿ ಶಾಂತವಾಯಿತು ಎಂದು ಕೊಂಚ ನಿಟ್ಟುಸಿರು ಬಿಡುತ್ತಿರುವಾಗಲೇ, ಇತ್ತೀಚೆಗೆ ಸಿದ್ದರಾಮಯ್ಯ ಅವರೇ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಯತೀಂದ್ರರು ಮತ್ತೆ ಹೇಳಿಕೆ ನೀಡಿದ್ದರು.

ಯತೀಂದ್ರ ಸಿದ್ದರಾಮಯ್ಯರ ಈ ಪ್ರವೃತ್ತಿ ಮತ್ತೆ ಪಕ್ಷ ಮುಜುಗರ ಕ್ಕೀಡಾಗುವಂತೆ ಮಾಡಿರುವುದು ಮಾತ್ರವಲ್ಲ ವಿರೋಧಪಕ್ಷಗಳಿಗೆ ಟೀಕೆಗೆ ವಿಷಯ ಒದಗಿಸಿ ಕೊಟ್ಟದ್ದಂತೆಯೂ ಆಗಿದೆ. ಇದರಿಂದ ಕೆರಳಿ ಕೆಂಡವಾಗಿರುವ ಸಿ.ಎಂ .ಸಿದ್ದರಾಮಯ್ಯ, ಕೂಡಲೇ ತನ್ನ ಪುತ್ರನನ್ನು ಕರೆಸಿಕೊಂಡು ಸುಮಾರು ಒಂದು ಘಂಟೆಗಳ ಕಾಲ ಕ್ಲಾಸ್ ತೆಗೆದು ಕೊಂಡು ಪುತ್ರನ ನಡೆಗೆ ಆಕ್ಷೇಪ ವ್ಯಕ್ತಪಡಿಸಿ ನಾಯಕತ್ವದ ಬಗ್ಗೆ ಯಾವ ಕಾರಣಕ್ಕೂ ಬಹಿರಂಗ ಹೇಳಿಕೆ ನೀಡಬಾರದು ಎಂದು ನೇರವಾಗಿಯೇ ಬಾಯಿಮುಚ್ಚಿ ಕೂರಬೇಕು ಎಂದು ಎಚ್ಚರಿಕೆ ನೀಡಿದರೆನ್ನುವುದು ತಿಳಿದುಬಂದಿದೆ.

ಇದೀಗ ಇದಕ್ಕೆ ವಿರುದ್ದವಾಗಿ ಡಿ.ಕೆ.ಶಿ ಬಣದಿಂದ ಇನ್ಯಾರು ಮಾತಿನ ಬಾಂಬು ಸಿಡಿಸುತ್ತಾರೋ ಎನ್ನುವ ಚಿಂತೆ ಮತ್ತು ಕುತೂಹಲ ಹೈಕಮಾಂಡಿಗೂ ರಾಜ್ಯದ ಜನಕ್ಕೂ ಕಾಡಿರುವುದಂತೂ ಸತ್ಯ.