ಖ್ಯಾತ ಅಂಕಣಕಾರ ಶ್ರೀ ಶಿವಸುಂದರ್ ಹೊಸ ಕ್ಯಾಲೆಂಡರ್ ಬಗ್ಗೆ ಬರೆದ ಭಾವನಾತ್ಮಕ ಕವನ
ಹೊಸತೇನಿದೆ ಹೊಸ ಕ್ಯಾಲೆಂಡರಿನಲ್ಲಿ?

ಶಿವಸುಂದರ್
(ಹೊಸವರ್ಷದಲ್ಲೂ ಹಳತಾಗದೇಕಿಲ್ಲಿ?… ಹಳೆಯ ವರ್ಷದ ಕವನ…!)
ಏನಿದೆ ಹೊಸತು ಈ ಬೆಳಗಲ್ಲೀ?
ಹಳತು ಹರಿಯದ..
ಇರುಳು ಕಚ್ಚಿದ …
ನಿನ್ನೆಯನೇ ಬಿಚ್ಚುಟ್ಟ ಈ ನಾಳೆಯಲ್ಲಿ…?
ಏನಿದೆ ಹೊಸತು
ಮುಂದುವರೆದ ಈ ನಿನ್ನೆಯಲ್ಲಿ?
ಜಗದಾದ್ಯಂತ ಪುಷ್ಯಶೃಂಗರ
ಪಟ್ಟಾಭಿಷೇಕ ನಡೆದಿರುವಾಗ
ಬುದ್ಧ ಬೆಳಕಿನ ಬೇಸಾಯವೇ
ಭಯೋತ್ಪಾದನೆಯಾಗಿರುವಾಗ ..
ಸ್ವಾತಂತ್ರ್ಯವು ಅಪರಾಧವಾಗಿ
ದಮನಗಳು ಧರ್ಮವಾಗಿರುವಾಗ
ಕರುಳ ಪ್ರೀತಿಯು ಅಮಾನ್ಯವಾಗಿ
ಜಾತಿಕತ್ತಿ ಕೊರಳ ಸೀಳುತ್ತಿರುವಾಗ ..
ಸೂರ್ಯನ ದಿನಚರಿಯೇ
ಇರುಳ ಉಸ್ತುವಾರಿಯಲ್ಲಿರುವಾಗ..
ಮುಂಜಾನೆಯ ಮುಂಗೋಳಿಗಳು
ಉಮರ್ ಖೈದಿನಲ್ಲಿರುವಾಗ…
ಏನಿದೆ ಹೊಸತು
ಮುಂದುವರೆದ ಈ ನಿನ್ನೆಯಲ್ಲಿ…?
ಮುಖದವಿಕಾರ ಮುಚ್ಚಿಡುವ
ಕನ್ನಡಿಗಳಿರುವ ತನಕ..
ನಂಜಿನ ಕೀವು ನೆತ್ತಿಗೇರಿ
ಕಣ್ಣು ಮಂಜಾಗಿರುವ ತನಕ..
ವಿಶ್ವಾಸ ಮೂಡಿಸದ
ಸಾಂಗತ್ಯಗಳಿರುವ ತನಕ
ಸುತ್ತುತ್ತಲೇ ಇರುವ ಮೆರವಣಿಗೆ
ಚಕ್ರವ್ಯೂಹ ಬೇಧಿಸದ ತನಕ..
ಏನಿದೆ ಹೊಸತು
ನಾಳೆಯಾಗದ ಈ ನಿನ್ನೆಯಲ್ಲಿ ?
ಮೊಹಲ್ಲಾಗಳ ಮುಂದೆ ಭುಸುಗುಟ್ಟುತ್ತಿರುವ
ಬುಲ್ದೊಜರ್ ಭೀತಿಯ
ಮತ್ತೊಂದು ಬೀಭತ್ಸ ದಿನದಲ್ಲಿ ..
ಕೇರಿಯಲೆಂದು ಕಾಲಿಡದ
ಗ್ರಹಣಸೂರ್ಯನ ನಡಿಗೆಯಲ್ಲಿ..
ಭಾನುವಾರಗಳೇ ಇರದ
ತಾಯಂದಿರ ಕ್ಯಾಲೆಂಡಿರಿನಲ್ಲಿ …
ಏನಿದೆ ಹೊಸತು ಮುಂದುವರೆದ
ನಿನ್ನೆಯ ಕಥೆಯಲ್ಲಿ ?
ಮನದ ನಡುಮನೆಯಲ್ಲಿ
ಕಾಪಿಟ್ಟ ಮನುಸಂತಾನ
ಸೈತಾನನನ ಸಾರಥಿಯಾಗಿರುವ ತನಕ..
ಏನಿದೆ ಹೊಸತು ಈ ಬೆಳಗಲ್ಲಿ?
ಹಳೆಯ ಪುಸ್ತಕದ
ಮತ್ತೊಂದು ಹಾಳೆಯಲ್ಲಿ…?
ಇರುಳ ಮರುಳಿಲ್ಲದ ಹೊಸ ಬೆಳಕು ಬೇಕೀಗ
ಕತ್ತಲ ಜೊತೆ ಒಳಒಪ್ಪಂದವಲ್ಲ
ದಮನಗಳ ಯುಗ ಯುಗಾಂತವಾಗಬೇಕೀಗ
ವೇಷ ಮರೆಸಿದ ವರ್ಷಾಂತವಲ್ಲ
ಹೊಸಹಗಲಿನ ಸಂಕ್ರಮಣಕ್ಕೆ ಸಿದ್ಧಾವಾಗಬೇಕೀಗ..
ಸಮತೆ ಮಮತೆಗಳ ಹಣತೆ ಹೊತ್ತು
ತ್ಯಾಗ ಬಲಿದಾನಗಳ ತೈಲ ಸುರಿದು..
– ಶಿವಸುಂದರ್

