ಆಟೋರಿಕ್ಷಾ ಚಾಲಕನೊಬ್ಬ ಈಗ ವಿಮಾನಯಾನ ಸಂಸ್ಥೆಯ ಮಾಲೀಕ. ಭಾರತದ ವಿಮಾನಯಾನ ಉದ್ಯಮಕ್ಕೊಂದು ಅಚ್ಚರಿಯ ಎಂಟ್ರಿ !
ಆಟೋರಿಕ್ಷಾ ಚಾಲಕನಾಗಿದ್ದವ ಈಗ ವಿಮಾನಯಾನ ಕಂಪೆನಿಯ ಮಾಲಿಕ. ಕೇರಳದ ಅಲ್ ಹಿಂದ್ ಏರ್ ಕಂಪೆನಿಯೊಂದಿಗೆ ಕೈಜೋಡಿಸಲು ಮುಂದಾದ ಯುಪಿಯ ಶಂಖ್ ಏರ್ ಕಂಪನಿ.
ಕೆಲವು ವರ್ಷಗಳ ಹಿಂದೆ ಉತ್ತರಪ್ರದೇಶದ ಕಾನ್ಪುರದಲ್ಲಿ ಆಟೋ ಮತ್ತು ಟೆಂಪೋ ಚಲಾಯಿಸಿಕೊಂಡಿದ್ದಾತ ಈಗ ಭಾರತದ ಹೊಚ್ಚ ಹೊಸದೊಂದು ವಿಮಾನ ಕಂಪನಿಯ ಮಾಲೀಕ.

ಸೇವೆಯನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರದಿಂದ ನೋ ಒಬ್ಜೆಕ್ಷನ್ ಸರ್ಟಿಫಿಕೇಟ್ (ಎನ್ಒಸಿ) ಗಿಟ್ಟಿಸಿಕೊಂಡ ಶಂಖ್ ಏರ್ ಸ್ಥಾಪಕ ಮತ್ತು ಚೇರ್ಮನ್ “ಶ್ರವಣ್ ಕುಮಾರ್”. ಶ್ರವಣ್ ಕುಮಾರ್ ಒಬ್ಬ ವಿಶ್ವಕರ್ಮ ಸಮುದಾಯಕ್ಕೆ ಸೇರಿದ ವ್ಯಕ್ತಿ. ಇವರ ಉದ್ಯಮವು ಇದೀಗ ವ್ಯಾಪಾರ ಜಗತ್ತಿನ ಯಾಶೋಗಾಥೆಗಳಲ್ಲಿ ಹೊಸದೊಂದು ಮೈಲಿಗಲ್ಲನ್ನು ಸ್ಥಾಪಿಸಿದೆ.
ಅಧಿಕೃತ ಶಿಕ್ಷಣ ಅರ್ಹತೆ ಇಲ್ಲದ ಒಬ್ಬ ವ್ಯಕ್ತಿ. ಆಟೋದಿಂದ ,ಟೆಂಪೋಗೆ, ನಂತರ ಸಾರಿಗೆ, ಅಲ್ಲಿಂದ ಸಿಮೆಂಟ್ ವ್ಯಾಪಾರದಲ್ಲಿ ತೊಡಗಿಸಿಕೊಂಡು ಆರಂಭದ ವರ್ಷಗಳನ್ನು ಸವೆಸಿದ ವ್ಯಕ್ತಿ ಶ್ರವಣ್ ಕುಮಾರ್.
ಕಾನ್ಪುರದ ಸಾಮಾನ್ಯ ಕುಟುಂಬದಲ್ಲಿ ಶ್ರವಣ್ ಜನನವಾಯಿತು. ಶ್ರವಣ್ ಮೊದಲು ಮಾಡಿದ್ದು. ಆಟೋ ಓಡಿಸುವಂತಹ ಸಣ್ಣ ಕೆಲಸಗಳು 2014 ರಲ್ಲಿ ಸಿಮೆಂಟ್ ವ್ಯಾಪಾರಕ್ಕೆ ಹೆಜ್ಜೆಯಿಟ್ಟ. ನಂತರ ಅದು ಸ್ಟೀಲ್ ಉದ್ಯಮಕ್ಕೆ ವ್ಯಾಪಿಸಿತು. ನಂತರ ಸಾರಿಗೆ ರಂಗಕ್ಕೆ ಪಾದಾರ್ಪಣೆ 400 ಕ್ಕಿಂತ ಹೆಚ್ಚು ಟ್ರಕ್‌ಗಳ ಮಾಲೀಕನಾಗಿ ಮೆಲ್ಲನೆ ಸಾಧನೆಯ ಮೆಟ್ಟಿಲುಗಳನ್ನೇರಿದ. ಇದೀಗ ಇಂಡಿಗೋ ಮತ್ತು ಏರ್ ಇಂಡಿಯಾ ಇತ್ಯಾದಿ ತಮ್ಮ ಹತೋಟಿಯಲ್ಲಿಟ್ಟುಕೊಂಡಿರುವ ಭಾರತೀಯ ವಿಮಾನಯಾನ ಜಗತ್ತಿಗೆ ಒಂದು ಹೊಸ ಕಂಪನಿ ಮತ್ತು ಮಾಲೀಕನ ಪಾದಾರ್ಪಣೆಯಾಗಿದೆ. ವಿಮಾನಕಂಪನಿಯ ಹೆಸರು ಶಂಖ್ ಏರ್ ಎಂದಾಗಿದೆ.

ಕೇರಳ ಮೂಲದ ಅಲ್-ಹಿಂದ್ ಏರ್ ಗೂ ಕೇಂದ್ರದಿಂದ ನಿರಾಕ್ಷೇಪಣಾ ಪತ್ರ (ಎನ್ಒಸಿ) ದೊರಕಿತ್ತು.
ಅಲ್-ಹಿಂದ್ ಏರ್, ಫ್ಲೈ ಎಕ್ಸ್‌ಪ್ರೆಸ್ ಎನ್ನುವ ಹೊಸ ಕಂಪೆನಿಗಳೂ ಇತ್ತೀಚೆಗೆ ಕೇಂದ್ರದ ಸಿವಿಲ್ ಏವಿಯೇಷನ್ ಕೇಂದ್ರದಿಂದ ನಿರಾಕ್ಷೇಪಣಾ ಪತ್ರ (ಎನ್ಒಸಿ) ಪಡೆಯಲಾಗಿತ್ತು
ಆದರೆ, ಶಂಖ್ ಏರ್ ಗೆ ಅದಕ್ಕೂಮುಂಚೆ ಎನ್ಒಸಿ ನೀಡಲಾಗಿತ್ತು ಎಂದು ಮಾಹಿತಿ ಲಭ್ಯವಾಗಿದೆ.
ಇಂಡಿಗೋ ಇತ್ತೀಚೆಗೆ ಎದುರಿಸುತ್ತಿರುವ ಬಿಕ್ಕಟ್ಟುಗಳ ನಂತರ ಇದು ಕೇಂದ್ರದ ಅತ್ಯಂತ ಪ್ರಮುಖ ನಿರ್ಧಾರವಾಗಿದೆ. ಕೇರಳದ ಕಂಪೆನಿಯು ಒಳಗೊಂಡಂತೆ ದೇಶದ ಮೂರು ಹೊಚ್ಚ ಹೊಸ ಕಂಪನಿಗಳು ಭಾರತದ ಆಕಾಶ ಮಾರ್ಗವನ್ನು ಆಳಲು ಹೊರಟಿರುವುದು ಒಂದು ವಿಶೇಷತೆಯಾಗಿದೆ. ಕೇರಳದ್ದೇ ಮತ್ತೊಂದು ಹೊಸ ವಿಮಾನಯಾನ ಕಂಪೆನಿಯಾದ ‘ ಏರ್ ಕೇರಳ’ ಅನುಮತಿಗಾಗಿ ಅರ್ಜಿಸಲ್ಲಿಸಿ ಸರತಿಯಲ್ಲಿದೆ.
ತನ್ನ ಇತರೇ ಉದ್ಯಮಗಳು ಗೆಲುವಾಗಿ ಬದಲಾಗುತ್ತಿರುವಂತೆ ,ಶ್ರವಣ್ ತನ್ನ ಬಾಲ್ಯದ ಕನಸಾಗಿದ್ದ ವಿಮಾನಯಾನ ಕಂಪೆನಿ ಎನ್ನುವ ಆಶಯಕ್ಕಾಗಿ ಕಠಿಣ ಪ್ರಯತ್ನಕ್ಕಿಳಿದ ಈ ಪ್ರಯತ್ನದ ಸಾಕ್ಷಾತ್ಕಾರವೇನೆಂದರೆ ಉತ್ತರಪ್ರದೇಶದ ಪ್ರಥಮ ವಿಮಾನಯಾನ ಕಂಪನಿ ಎಂಬ ಕನಸು .ಈ ಕನಸು ಆರಂಭಗೊಂಡದ್ದು 4 ವರ್ಷಗಳ ಹಿಂದೆ. ಅಲ್ಲಿಂದ ಇಲ್ಲಿಯವರೆಗೆ ತಲುಪಲು ಶ್ರವಣ್ ಅತ್ಯಂತ ಕಠಿಣ ದಾರಿಯಲ್ಲಿ ಸಾಗುವಂತಾಯಿತು.
ವಾಯುಯಾನ ವಲಯದ ಕಾರ್ಯಚಟುವಟಿಕೆಯನ್ನು ಆಳವಾಗಿ ಅರ್ಥಮಾಡಿಕೊಳ್ಳುವುದು ಮೊದಲ ಹಂತವಾಗಿತ್ತು. ಕಾರ್ಯಚಟುವಟಿಕೆಯನ್ನು ಪ್ರಾರಂಭಿಸಲು ವಿಮಾನಯಾನ ಸಚಿವಾಲಯದ ಏರ್ ಆಪರೇಟರ್ ಪ್ರಮಾಣಪತ್ರವು ಅತ್ಯಗತ್ಯವಾಗಿತ್ತು.
ಆರಂಭದಲ್ಲಿ ಉತ್ತರ ಪ್ರದೇಶದ ಲಕ್ನೋದಿಂದ ಮುಂಬೈ, ದೆಹಲಿಯಂತಹ ಮೆಟ್ರೋ ನಗರಗಳಿಗೆ ಸೇವೆ. ಇದರೊಂದಿಗೆ ಯುಪಿಯ ವಿವಿಧ ನಗರಗಳನ್ನು ಸಂಪರ್ಕಿಸುವ ಸೇವೆಗಳಿವೆ. ಇದಕ್ಕಾಗಿ ಮೂರು ಏರ್ ಬಸ್ ವಿಮಾನಗಳು ಬಾಡಿಗೆಗೆ ತೆಗೆದುಕೊಳ್ಳುತ್ತೇವೆ. ಹೊಸತಾಗಿ ಎರಡು ವಿಮಾನಗಳು ಕೂಡ ಅಷ್ಟರೊಳಗೆ ತಲುಪುತ್ತದೆ.
ಪ್ರಾರಂಭದಲ್ಲಿ ಸಾಲದ ಮೂಲಕ ಅಗತ್ಯವಿರುವ ಆರ್ಥಿಕತೆಯನ್ನು ಹೊಂದಿಸಲಾಗುವುದು. ಮೂರು ವರ್ಷಗಳಲ್ಲಿ ವಿದೇಶೀ ಸೇವೆಯನ್ನು ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ. ಶಂಖ್ ಏರ್ ಜನಸಾಮಾನ್ಯರಿಗಾಗಿ ಇರುವ ವಿಮಾನವಾಗಿರಲಿದೆ ಎಂದು ಶ್ರಾವಣ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಹಾಗೇ ಸೀಸನ್ ಸಮಯದಲ್ಲಿ ಟಿಕೆಟ್ ದರ ಹೆಚ್ಚಿಸುವುದಿಲ್ಲ ಎನ್ನುವ ಭರವಸೆಯನ್ನು ಕೂಡಾ ನೀಡಿರುತ್ತಾರೆ.
ಪ್ರಸ್ತುತ ಭಾರತೀಯ ವಿಮಾನಯಾನ ವಲಯದ 90 ಶೇಕಡಾ ಆಧಿಪತ್ಯ ಇಂಡಿಗೋ ಮತ್ತು ಏರ್ ಇಂಡಿಯಾದ ಹತೋಟಿಯಲ್ಲಿದೆ. ಮಧ್ಯಮವರ್ಗದವರು ಮತ್ತು ಜನಸಾಮಾನ್ಯರನ್ನು ಗುರಿಯಿಟ್ಟು ತಮ್ಮ ಕಂಪೆನಿ ಆರಂಭಿಸಿದ ಕಾರಣ ಭವಿಷ್ಯದಲ್ಲಿ ಶಂಖ್ ಏರ್ ಬೆಳವಣಿಗೆಯಲ್ಲಿ ಸಹಾಯವಾಗಬಹುದೆಂದು ಭಾವಿಸಲಾಗಿದೆ.
ಇತರ ಕಂಪನಿಗಳ ಸ್ವಾಧೀನವಿಲ್ಲದ ರೂಟ್‌ಗಳಿಗೆ ನಿಖರಾವಾದ ಸಮಯ ಪಾಲನೆಯೊಂದಿಗೆ ಕಂಪೆನಿಯು ಸೇವೆಯನ್ನು ನೀಡಲಿದೆ ಎಂದು ಇದೀಗ ಕಂಪನಿಯು ಸ್ಪಷ್ಟಪಡಿಸಿದೆ. ಆದರೆ ದೊಡ್ಡ ಮಟ್ಟದ ಬಂಡವಾಳ ಅಗತ್ಯವಿರುವ ವಿಮಾನಯಾನ ಉದ್ಯಮದಲ್ಲಿ ಶಂಖ್ ಏರ್ ಕಂಪೆನಿ ಕಠಿಣ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾದಿತು ಎನ್ನುವ ವಾದಗಳೂ ಇವೆ.
ಹೊಸ ಉದ್ಯಮ ಆರಂಭಿಸಿದರೆ ಗೆಲ್ಲಬಹುದೇ ಎಂದು ಗೊಂದಲದಲ್ಲಿರುವ ಹೊಸತಲೆಮಾರಿಗೆ ಶ್ರವಣ್ ಕುಮಾರ್ ಅವರ ಈ ಪ್ರಯತ್ನ ಕುತೂಹಲ ಕೆರಳಿಸಿದಂತೂ ಸತ್ಯ .ಮತ್ತು ಶಂಖ್ ಏರ್ ಕಂಪನಿಗೆ ಗೆಲುವನ್ನು ಹಾರೈಸುತ್ತಿದ್ದಾರೆ.

