ಮಾನವೀಯ ನೆಲೆಯಲ್ಲಿ ಅರ್ಹರಿಗೆ ಮನೆಗಳನ್ನು ನಿರ್ಮಿಸಿ ಕೊಡುತ್ತೇವೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ರಾಜ್ಯ ಹಾಗೂ ಹೊರರಾಜ್ಯಗಳಲ್ಲೂ ಸದ್ದು ಮಾಡಿ ಉತ್ತರಪ್ರದೇಶದ ಬುಲ್ಡೋಜರ್ ಸರಕಾರದಂತೆ ಕರ್ನಾಟಕ ಸರಕಾರವೂ ನಡೆದುಕೊಳ್ಳುತ್ತಿದೆಯೇ ಎಂದು ಆತಂಕ ವ್ಯಕ್ತಪಡಿಸಿದ ಪ್ರಕರಣವಾಗಿತ್ತು ಬೆಂಗಳೂರಿನ ಕೋಗಿಲು ಬಳಿ ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್ಡುಗಳ ತೆರವು ಕಾರ್ಯಾಚರಣೆ.

ಇದೀಗ ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ಪ್ರತಿಕ್ರಿಯಿಸಿದ್ದು ಕೋಗಿಲು ಬಳಿ ಸರಕಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಸುಮಾರು 167 ಶೆಡ್‍ಗಳನ್ನು ನೋಟಿಸ್ ನೀಡಿದ ಬಳಿಕವೇ ತೆರವುಗೊಳಿಸಲಾಗಿದೆ. ಆದರೂ ಮಾನವೀಯ ನೆಲೆಯಲ್ಲಿ ಅರ್ಹರಿಗೆ ಮನೆಗಳನ್ನು ನಿರ್ಮಿಸಿ ಕೊಡಲಿದ್ದೇವೆ ಎಂದು ಸಿ.ಎಂ ಸಿದ್ದರಾಮಯ್ಯ ತಿಳಿಸಿರುತ್ತಾರೆ.

ಮುಖ್ಯಮಂತ್ರಿಯ ಸರಕಾರಿ ನಿವಾಸ ಕಾವೇರಿಯಲ್ಲಿ ಉಪ ಮುಖ್ಯಮಂತ್ರಿಗಳು, ಸಚಿವರು ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜಿಲ್ಲಾಧಿಕಾರಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ದ ಆಯುಕ್ತರು, ವಸತಿ ಇಲಾಖೆಯ ಅಧಿಕಾರಿಗಳು ಮೂರು ದಿನಗಳ ಕಾಲ ಅಲ್ಲಿ ವಾಸಿಸುತ್ತಿದ್ದವರ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಎಲ್ಲವನ್ನೂ ಪರಿಶೀಲಿಸಿ ಮನೆ ಹಾಗೂ ನಿವೇಶನ ಇಲ್ಲದ ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸಲು ಸಲಹೆ ನೀಡಿರುತ್ತೇವೆ ಅದನ್ನು ನೀಡಿದ ಬಳಿಕ ಪರಿಶೀಲಿಸಿ ನಾವು ಮನೆಯನ್ನು ನೀಡುವ ಕೆಲಸ ಮಾಡಲಿದ್ದೇವೆ ಎಂದರು.

2020-21ರಿಂದ ಕೆಲವರು ಅಲ್ಲಿ ಅಕ್ರಮವಾಗಿ ಶೆಡ್‍ಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದರು. ಈ ಬಗ್ಗೆ ಗಮನ ಹರಿಸದ ಆ ಭಾಗದ ಕಂದಾಯ ಹಾಗೂ ಪಾಲಿಕೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ತಹಶೀಲ್ದಾರ್, ಶಿರಸ್ತೇದಾರ, ಗ್ರಾಮ ಆಡಳಿತಾಧಿಕಾರಿಯ ಗಮನಕ್ಕೆ ಬಾರದೆ ಇಂತಹ ಒತ್ತುವರಿ ಆಗಲು ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ತಿಳಿಸಿದರು.
ಭವಿಷ್ಯದಲ್ಲಿ ಈ ರೀತಿ ಸರಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡು ಅನಧಿಕೃತ ನಿರ್ಮಾಣ ಆಗದಂತೆ ತಡೆಯಬೇಕು ಎಂಬುದು ನಮ್ಮ ಉದ್ದೇಶ. ಯಾರಾದರೂ ಇಂತಹ ಬೆಳವಣಿಗೆಗಳಿಗೆ ಅವಕಾಶ ಮಾಡಿಕೊಟ್ಟರೆ ಸಂಬಂಧಪಟ್ಟ ಅಧಿಕಾರಿಗಳನ್ನೆ ಹೊಣೆಗಾರರನ್ನಾಗಿಸಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು.

ಈ ವಿಚಾರದ ಬಗ್ಗೆ ದಿಲ್ಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ನನ್ನ ಜೊತೆ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆಯೂ ಚರ್ಚೆ ಮಾಡಿದ್ದಾರೆ. ಅದೇ ಜಾಗದಲ್ಲಿ ಅವರಿಗೆ ಮನೆಗಳನ್ನು ಕೊಡಲು ಆಗುವುದಿಲ್ಲ. ಅದು ಸರಕಾರಿ ಜಾಗವಾಗಿದ್ದು, ಅಕ್ರಮವಾಗಿ ಶೆಡ್‍ಗಳನ್ನು ನಿರ್ಮಿಸಿಕೊಂಡಿದ್ದಾರೆ. ಎಂದು ಅವರಿಗೆ ಮಾಹಿತಿ ನೀಡಿದ್ದೇನೆ ಎಂದು ಸಿ.ಎಂ ಸಿದ್ದರಾಮಯ್ಯ ತಿಳಿಸಿದರು.

ನಿರಾಶ್ರಿತರಿಗೆ ತಾತ್ಕಾಲಿಕವಾಗಿ ಊಟ, ವಸತಿ ಸೌಕರ್ಯ ಕಲ್ಪಿಸುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‍ ರಾವ್ ಮತ್ತು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ ಅವರಿಗೆ ತಿಳಿಸಿದ್ದೆ. ಮೂರು ಕಡೆ ಅವರಿಗಾಗಿ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಅಲ್ಲಿರುವವರು ಯಾರು ಹೋಗಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
ಸುತ್ತಮುತ್ತಲಿನ ಪರಿಸರ ಕಾಪಾಡಲು ವ್ಯವಸ್ಥೆ ಮಾಡಿದ್ದೇವೆ.

ಬೇರೆಯವರಿಗೆ ರಾಜಕಾರಣ ಮಾಡಲು ಅವಕಾಶ ನೀಡಲ್ಲ. ವರಿಷ್ಠರು ನಮಗೆ ಕೆಲವು ಸಲಹೆ ನೀಡಿದ್ದಾರೆ. ಅದರಂತೆ, ಗಮನ ಹರಿಸಿ ಯಾರಿಗೆ ಮನೆಗಳು ಇಲ್ಲ, ಅಂತಹವರನ್ನು ಗುರುತಿಸಿ ಮನೆಗಳನ್ನು ನೀಡುವ ಕೆಲಸ ಮಾಡಲಾಗುತ್ತಿದೆ. ಸರಕಾರದಲ್ಲಿ ಮನೆಗಳಿಗಾಗಿ ಸಹಾಯಧನದ ವ್ಯವಸ್ಥೆಯೂ ಇದೆ. ಸಾಲ ಕೊಡಿಸುವ ಕೆಲಸವನ್ನು ಮಾಡುತ್ತೇವೆ ಎಂದು ಡಿ.ಕೆ ಶಿವಕುಮಾರ್ ಅವರು ತಿಳಿಸಿದರು.

ಸಭೆಯಲ್ಲಿ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕ ಪ್ರಸಾದ್ ಅಬ್ಬಯ್ಯ, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್,
ಜಿಬಿಎ ಮುಖ್ಯ ಆಯುಕ್ತ ಡಾ.ಮಹೇಶ್ವರರಾವ್, ಬೆಂಗಳೂರು ಜಿಲ್ಲಾಧಿಕಾರಿ ಜಗದೀಶ್, ಘನ ತ್ಯಾಜ್ಯ ನಿರ್ವಹಣೆ ನಿಯಮಿತ ಸಿಇಓ ಕರೀಗೌಡ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *