ಬಳ್ಳಾರಿಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆ: ಕಾಂಗ್ರೆಸ್ ಕಾರ್ಯಕರ್ತನ ಗುಂಡಿಕ್ಕಿ ಹತ್ಯೆ. ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಮನೆಯ ಮುಂದೆ ಬ್ಯಾನರ್ ಅಳವಡಿಕೆಗೆ ಸಂಬಂಧಿಸಿದಂತೆ ಘರ್ಷಣೆ 

ಬಳ್ಳಾರಿಯಲ್ಲಿ ಪರಿಸ್ಥಿತಿ ಉದ್ವಿಗ್ನ, ಸೆಕ್ಷನ್ 144 ಜಾರಿ

ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಮನೆಯ ಮುಂದೆ ಬ್ಯಾನರ್ ಕಟ್ಟುವ ವಿಷಯದಲ್ಲಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಕಾಂಗ್ರೆಸ್ ಕಾರ್ಯಕರ್ತನೋರ್ವ ಗುಂಡೇಟಿಗೆ ಬಲಿಯಾದ ದಾರುಣ ಘಟನೆ ನಿನ್ನೆ ಬಳ್ಳಾರಿಯಲ್ಲಿ ನಡೆಯಿತು. ಸ್ಥಳದಲ್ಲಿ ಪೊಲೀಸರು ಬಿಗಿ ಭದ್ರತೆ ನಿಯೋಜಿಸಲಾಗಿದೆ.

ಬಳ್ಳಾರಿ: 3 ರಂದು ಶನಿವಾರ ಪ್ರತಿಷ್ಠಾಪನೆ ಆಗಲಿರುವ ವಾಲ್ಮೀಕಿ ಪ್ರತಿಮೆ ಕಾರ್ಯಕ್ರಮ ಸಂಬಂಧ ಬ್ಯಾನರ್‌ ಕಟ್ಟುವ ವಿಷಯದಲ್ಲಿ ಬಳ್ಳಾರಿಯಲ್ಲಿ ಕಳೆದ ರಾತ್ರಿ ಎರಡು ಗುಂಪುಗಳ ಮಧ್ಯೆ ಜಗಳ ಆರಂಭವಾಗಿ ಘರ್ಷಣೆ ತಿರುಗಿ ಪರಿಸ್ಥಿತಿ ತಾರಕಕ್ಕೇರಿದೆ ಇದೀಗ ನಗರ ಬೂದಿ ಮುಚ್ಚಿದ ಕೆಂಡದಂತಿದೆ. ಇಂದು ಪೊಲೀಸರು ಸೆಕ್ಷನ್ 144 ಜಾರಿ ಮಾಡಿದ್ದಾರೆ.

ನಡೆದ ಘಟನೆಯೇನು?
ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಕಾಂಗ್ರೆಸ್ ಕಾರ್ಯಕರ್ತನೋರ್ವ ಗುಂಡೇಟಿಗೆ ಬಲಿಯಾದ ಕರುಣಾಜನಕ ಘಟನೆ ನಿನ್ನೆ ಬಳ್ಳಾರಿಯಲ್ಲಿ ನಡೆಯಿತು. ಶಾಸಕ ಜನಾರ್ದನ ರೆಡ್ಡಿ ಮನೆ ಮುಂಬಾಗದಲ್ಲೇ ಈ ಘಟನೆ ನಡೆದಿದೆ. ಜ: 3 ರಂದು ಶನಿವಾರ ವಾಲ್ಮೀಕಿ ಪುತ್ತಳಿ ಪ್ರತಿಷ್ಠಾಪನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಳ್ಳಾರಿ ನಗರದಾದ್ಯಂತ ಬ್ಯಾನರ್‌ಗಳನ್ನು ಅಳವಡಿಸಲಾಗುತ್ತಿದೆ. ಅದೇ ರೀತಿ, ಅವಂಬಾವಿಯ ಜನಾರ್ದನ ರೆಡ್ಡಿ ಅವರ ನಿವಾಸದೆದುರು ಬ್ಯಾನರ್ ಅಳವಡಿಸಲು ಹೊರಟಾಗ ಅದನ್ನು ರೆಡ್ಡಿ ಅವರ ಬೆಂಬಲಿಗರು ವಿರೋಧಿಸಿದ್ದಾರೆ. ಈ ವೇಳೆ ಜನಾರ್ದನ ರೆಡ್ಡಿ ಹಾಗೂ ಶಾಸಕಭರತ್‌ ರೆಡ್ಡಿ ಬೆಂಬಲಿಗರ ನಡುವೆ ತೀವ್ರ ಸಂಘರ್ಷವೇ ನಡೆದುಹೋಗಿದೆ.
ಈ ಸಂಘರ್ಷದ ನಡುವೆ ಅಚಾನಕ್ಕಾಗಿ ಸಿಡಿದ ಗುಂಡಿಗೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ (28) ಮೃತಪಟ್ಟಿದ್ದಾರೆ.

ಕಾಂಗ್ರೆಸ್‌ ಶಾಸಕ ನಾರಾ ಭರತ್‌ ರೆಡ್ಡಿ ಹಾಗೂ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರ ಸಾವಿರಾರು ಬೆಂಬಲಿಗರು ಬಡಿಗೆ, ಕಬ್ಬಿಣದ ರಾಡ್‌, ಕಲ್ಲು ಹಿಡಿದು ಬಡಿದಾಡಿಕೊಂಡಿದ್ದಾರೆ. ಶಾಸಕ ನಾರಾ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಖಾಸಗಿ ಅಂಗರಕ್ಷಕರು ಗುಂಡು ಹಾರಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಆರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಬಳಿಕ ಗೋಲಿಬಾರ್‌ ನಡೆಸಿದ್ದಾರೆ. ಈ ವೇಳೆ ಗುಂಡೇಟಿಗೆ ಓರ್ವ ಯುವಕ ಬಲಿಯಾಗಿದ್ದಾನೆ. ಹಲವಾರು ಮಂದಿ ಗಾಯಗೊಂಡಿದ್ದಾರೆ. ಈ ಮಧ್ಯೆ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.

ಮೃತಪಟ್ಟ ವ್ಯಕ್ತಿಯನ್ನು ಬಳ್ಳಾರಿ ಹುಸೇನ ನಗರದ ರಾಜಶೇಖರ (28) ಎಂದು ಹೇಳಲಾಗಿದೆ. ಆತ ತಮ್ಮ ಬೆಂಬಲಿಗ ಎಂದು ಕಾಂಗ್ರೆಸ್‌ ಶಾಸಕ ನಾರಾ ಭರತ್ ರೆಡ್ಡಿ ಮಾಧ್ಯಮಗಳ ಎದುರು ಖಚಿತಪಡಿಸಿದ್ದಾರೆ.

ಬ್ಯಾನರ್‌ ತೆರವುಗೊಳಿಸಿದ ಸುದ್ದಿ ತಿಳಿದ ಭರತ್ ರೆಡ್ಡಿ ಬೆಂಬಲಿಗ ಎನ್ನಲಾದ ಸತೀಶ್ ರೆಡ್ಡಿ ಎಂಬುವರು ಜನಾರ್ದನ ರೆಡ್ಡಿ ಮನೆ ಎದುರು ರಸ್ತೆಯಲ್ಲಿ ಕುರ್ಚಿ ಹಾಕಿ ಕುಳಿತು ಪುನಃ ಬ್ಯಾನರ್ ಕಟ್ಟಿಸಿದರು ಎನ್ನಲಾಗಿದೆ. ಈಮಧ್ಯೆ ಸಂಘರ್ಷ ನಡೆಯುತ್ರುತಿರುವುದು ತಿಳಿದು ಸ್ಥಳಕ್ಕೆ ಬಂದ ಶ್ರೀರಾಮುಲು ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು. ಅವರ ಮಾತು ಕೇಳದ ಭರತ್ ರೆಡ್ಡಿ ಬೆಂಬಲಿಗರು ಒಪ್ಪಲಿಲ್ಲ ಎನ್ನಲಾಗಿದ್ದು ನಂತರ ಇತ್ತಂಡಗಳಿಂದಲೂ ಕಲ್ಲುತೂರಾಟ ನಡೆದಿದೆ ಎನ್ನಲಾಗಿದೆ. ಅತ್ತ ಜನಾರ್ದನ ರೆಡ್ಡಿ ಬೆಂಬಲಿಗರೂ ಘರ್ಷಣೆಗೆ ಇಳಿದಿದ್ದಾರೆ. ಎರಡು ಬಣಗಳ ನಡುವೆ ಮೊದಲಿಗೆ ಮಾತಿನ ಚಕಮಕಿ ನಡೆದಿದೆ. ಬಳಿಕ ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ಈ ವಿಷಯ ತಿಳಿದು ಜನಾರ್ದನ ರೆಡ್ಡಿ ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಪರಿಸ್ಥಿತಿ ತಾರಕಕ್ಕೇರಿ ಸತೀಶ್ ರೆಡ್ಡಿ ಖಾಸಗಿ ಅಂಗರಕ್ಷಕರು ಎರಡು ಸುತ್ತು‌ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆಂದು ತಿಳಿದುಬಂದಿದೆ.

ಆಗ ಗುಂಡಿನ ಖಾಲಿ ಕೊಳವೆ ಪ್ರದರ್ಶಿಸಿದ ಜನಾರ್ದನ ರೆಡ್ಡಿ ಇದು ನನ್ನ ಹತ್ಯೆಗೆ ನಡೆದ ಯತ್ನ ಎಂದು ಆರೋಪಿಸಿ ತಮ್ಮ ಗುಂಪಿನೊಂದಿಗೆ ಮತ್ತೆ ಘರ್ಷಣೆಗೆ ಇಳಿದಿದ್ದಾರೆ. ಘರ್ಷಣೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, ಆದರೆ ಗಾಯಗೊಂಡವರ ನಿಖರ ಸಂಖ್ಯೆ ಇನ್ನೂ ತಿಳಿದುಬಂದಿಲ್ಲ.

ಈ ವಿಷಯ ತಿಳಿದು ಶಾಸಕ ಭರತ್ ರೆಡ್ಡಿ ಅವರ ಸಾವಿರಕ್ಕೂ ಹೆಚ್ಚು ಬೆಂಬಲಿಗರು ಬಂದಿದ್ದಾರೆ. ನಂತರ ನಗರದ ಎಸ್ಪಿ ಸರ್ಕಲ್‌ನಿಂದ ಜನಾರ್ದನ ರೆಡ್ಡಿ ನಿವಾಸಕ್ಕೆ ದೊಣ್ಣೆ, ಕೋಲು, ಕಟ್ಟಿಗೆ, ಕಲ್ಲುಗಳೊಂದಿಗೆ ಬಂದರು ಆಗ ಮತ್ತೆ ಸ್ಥಿತಿ ತಾರಕಕ್ಕೇರಿ ಮತ್ತೆ ಘರ್ಷಣೆ ನಡೆದಿದೆ ಎನ್ನಲಾಗಿದೆ. ಪೊಲೀಸರು ಮಧ್ಯಪ್ರವೇಶಿಸಿ ಗಾಳಿಯಲ್ಲಿ ಹಲವು ಸುತ್ತು ಗುಂಡು ಹಾರಿಸಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಗೋಲಿಬಾರ್‌ ನಡೆದಿದೆ.

ಈ ಮಧ್ಯೆ ಐಜಿಪಿ ವರ್ತಿಕಾ ಕಟಿಯಾರ್‌ ಸೇರಿ ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಹೆಣಗಾಡುತ್ತಿದ್ದಾರೆ. ಶಾಸಕ ನಾರಾ ಭರತ ರೆಡ್ಡಿ ಹಾಗೂ ಬೆಂಬಲಿಗರು ಗಂಗಾವತಿ ಶಾಸಕ ಜನಾರ್ದನ ರೆಡ್ಡಿಯವರನ್ನು ಬಂಧಿಸಬೇಕೆಂದು ಆಗ್ರಹಿಸಿ ಸ್ಥಳದಲ್ಲಿಯೇ ಧರಣಿ ಕುಳಿತಿದ್ದಾರೆ. ಅವರ ಮನವೊಲಿಸಲು ಪೊಲೀಸ್, ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ನನ್ನ ಹತ್ಯೆಗೆ ಸಂಚು: ಶಾಸಕ ಜನಾರ್ದನ ರೆಡ್ಡಿ ಆರೋಪ

ಘಟನೆ ವೇಳೆ ಸಿಡಿದ ಗುಂಡನ್ನು ಶಾಸಕ ಜನಾರ್ದನರೆಡ್ಡಿ ಪ್ರದರ್ಶಿಸಿದ್ದಾರೆ. ಇದು ನನ್ನ ಹತ್ಯೆಗೆ ನಡೆದ ಸಂಚು ಎಂದು ಆರೋಪಿಸಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟ ಶಾಸಕ ಭರತ್ ​​ರೆಡ್ಡಿ, ನನ್ನ ಮುಂದೆ ಇಂಥಾ ಚಿಲ್ಲರೆ ರಾಜಕೀಯ ನಡೆಯಲ್ಲ. ಜನಾರ್ದನರೆಡ್ಡಿ ಹತ್ಯೆಗೆ ಸಂಚು ಮಾಡುವ ಅಗತ್ಯ ನನಗಿಲ್ಲ. ಜನಾರ್ದನ ರೆಡ್ಡಿ ಏನು ದೊಡ್ಡ ಪಾಳೆಗಾರನಾ ಎಂದು ಪ್ರಶ್ನಿಸಿದ್ದಾರೆ.

ಜನಾರ್ದನ ರೆಡ್ಡಿ, ಶ್ರೀರಾಮುಲು ಸೇರಿ 11 ಮಂದಿ ವಿರುದ್ಧ ಎಫ್​ಐಆರ್

ಘಟನೆ ಸಂಬಂಧ ಶಾಸಕ ಜನಾರ್ದನರೆಡ್ಡಿ, ಮಾಜಿ ಸಚಿವ ಶ್ರೀರಾಮುಲು, ಮಾಜಿ ಶಾಸಕ ಸೋಮಶೇಖರ್ ರೆಡ್ಡಿ, ಅಲಿಖಾನ್​​​, ದಮ್ಮೂರ ಶೇಖರ್ ಸೇರಿ 11 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಘಟನಾ ಸ್ಥಳದ ೨೦೦ ಮೀಟರ್‌ ಸುತ್ತಳತೆಯಲ್ಲಿ ಸೆಕ್ಷನ್ 144 ಜಾರಿ

ಘಟನೆ ಬಗ್ಗೆ ಗೃಹಸಚಿವ ಡಾ. ಜಿ ಪರಮೇಶ್ವರ್ ಶಾಸಕ ಭರತ್​ ರೆಡ್ಡಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಇನ್ನು ಪರಿಸ್ಥಿತಿ ಸುಧಾರಿಸದ ಹಿನ್ನೆಲೆ ಘಟನಾ ಸ್ಥಳದ 200 ಮೀ. ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್​ ಆದೇಶ ಹೊರಡಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಜನಾರ್ದನ ರೆಡ್ಡಿ ಬಂಧಿಸುವಂತೆ ಅವರ ನಿವಾಸದೆದುರೇ ಶಾಸಕ ಭರತ್ ರೆಡ್ಡಿ ಠಿಕಾಣಿ ಹೂಡಿದ್ದರೆ, ಇತ್ತ ಶ್ರೀರಾಮುಲು ರೆಡ್ಡಿ ನಿವಾಸದಲ್ಲೇ ಉಳಿದುಕೊಂಡಿದ್ದಾರೆನ್ನಲಾಗಿದೆ.

Leave a Reply

Your email address will not be published. Required fields are marked *