ಯುವತಿಗೆ ಬರ್ತ್ ಡೇ ವಿಶ್ ಮಾಡಿದ್ದಕ್ಕೆ ಕೊಲೆ!
“ಪ್ರೀತಿಸುತ್ತಿದ್ದ ಯುವತಿಗೆ ಮತ್ತೋರ್ವನ ಜೊತೆ ನಿಶ್ಚಿತಾರ್ಥ; ತರೀಕೆರೆಯೆಂಬಲ್ಲಿ ನಡೆದು ಹೋಯಿತು ಪೈಶಾಚಿಕ ಕೃತ್ಯ”
ಚಿಕ್ಕಮಗಳೂರು: ಸಾಮಾಜಿಕ ಜಾಲತಾಣದಲ್ಲಿ ಯುವತಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದಕ್ಕೆ ಯುವಕನಿಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ತರೀಕೆರೆ ತಾಲೂಕು ಅತ್ತಿಗನಾಳು ಗ್ರಾಮದಲ್ಲಿ ಬುಧವಾರ (ಡಿ.31)ರಂದು ನಡೆದಿದೆ.
ಮೃತ ಯುವಕ ಮಂಜುನಾಥ್ (28) ಎಂದು ತಿಳಿದು ಬಂದಿದೆ ಮಂಜುನಾಥ ಉಡೇವಾ ಮೂಲದವನಾಗಿದ್ದು, ಶುಭಕೋರಿದ ಯುವತಿಗೆ ವೇಣು ಎಂಬಾತನ ಜತೆ ಮದುವೆ ನಿಶ್ಚಿತಾರ್ಥವಾಗಿತ್ತು.
ಮೃತ ಮಂಜುನಾಥ ಮತ್ತು ನಿಶ್ಚಿತಾರ್ಥವಾಗಿದ್ದ ಯುವತಿ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಮಂಜುನಾಥ ಸಾಮಾಜಿಕ ಜಾಲತಾಣದಲ್ಲಿ ಯುವತಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದ. ಇದರಿಂದ ಕೋಪಗೊಂಡ ಪರಿಣಾಮ ಮಂಜುನಾಥ ಅತ್ತಿಗನಾಳು ಗ್ರಾಮಕ್ಕೆ ಅಡಿಕೆ ಕೆಲಸಕ್ಕೆ ಹೋದಾಗ ಮಾರ್ಗಮಧ್ಯೆ ಈ ವಿಷಯದಲ್ಲಿ ಮಂಜುನಾಥ ಹಾಗೂ ವೇಣು ನಡುವೆ ಗಲಾಟೆ ನಡೆದಿದೆ. ಈ ವೇಳೆ ವೇಣು ಕೋಪಗೊಂಡು ಮಂಜುನಾಥ್ ಗೆ ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಮಂಜುನಾಥನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಕೊಡಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ.
ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲೀಸರು ತನಿಖೆ ನಡೆಸುತ್ತಿದ್ದಾರೆ.

