“ಸುಳ್ಯ ಮೀಸಲು ಕ್ಷೇತ್ರದಲ್ಲಿ ಅಂಬೇಡ್ಕರ್ ಭವನ ಆಗಿಲ್ಲವೆಂದರೆ ಕೇಳಿಸಿಕೊಳ್ಳಲು ನಾಚಿಕೆ”
ಜನಪ್ರತಿನಿಧಿಗಳು ಮಾಡದಿದ್ದರೆ ಜನರು ಹಕ್ಕು ಬಳಸಿ ಕೇಳಬೇಕಲ್ಲವೇ? — ಯಾಕೆ ಇಷ್ಟು ವರ್ಷ ಸಹಿಸಿಕೊಂಡಿದ್ದೀರಿ?
ಸುಳ್ಯದ ಅಂಬೇಡ್ಕರ್ ಭವನ ನಾನು ಮಾಡಿಸುತ್ತೇನೆ — ಎಸ್ಸಿ, ಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯಕ್ಷೆ ಪಲ್ಲವಿ ಜಿ. ಭರವಸೆ**

ಸುಳ್ಯ, ಜ.6:
ಸುಳ್ಯ ಮೀಸಲು ಕ್ಷೇತ್ರದಲ್ಲಿ ಅಂಬೇಡ್ಕರ್ ಭವನ ಇನ್ನೂ ನಿರ್ಮಾಣವಾಗಿಲ್ಲ ಎಂಬ ವಿಷಯ ತಿಳಿದಾಗ ಕೇಳಿಸಿಕೊಳ್ಳಲು ನಾಚಿಕೆಯ ಸಂಗತಿ ಎಂದು ರಾಜ್ಯ ಪ.ಜಾತಿ, ಪ.ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಪಲ್ಲವಿ ಜಿ. ತೀವ್ರವಾಗಿ ಪ್ರತಿಕ್ರಿಯಿಸಿದರು.
“ಜನಪ್ರತಿನಿಧಿಗಳು ಕೆಲಸ ಮಾಡಿಲ್ಲವೆಂದರೆ ಜನರು ತಮ್ಮ ಹಕ್ಕು ಬಳಸಿಕೊಂಡು ಕೇಳಬೇಕಲ್ಲವೇ? ಇಷ್ಟು ವರ್ಷ ಯಾಕೆ ಸಹಿಸಿಕೊಂಡಿದ್ದೀರಿ?” ಎಂದು ಅವರು ನೇರವಾಗಿ ಪ್ರಶ್ನಿಸಿದರು.
ಜ.6ರಂದು ಸುಳ್ಯ ತಾಲ್ಲೂಕು ಪಂಚಾಯತ್ ಕಚೇರಿಯಲ್ಲಿ ನಡೆದ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸಿದ ಅಧ್ಯಕ್ಷೆ ಪಲ್ಲವಿ ಜಿ., ಅಂಬೇಡ್ಕರ್ ಭವನ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಎಂಬ ಮಾಹಿತಿ ತಿಳಿದು ಆಶ್ಚರ್ಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಅಜ್ಜಾವರದ ಚಂದ್ರಶೇಖರ ಪಲ್ಲತ್ತಡ್ಕರು ವಿಷಯ ಪ್ರಸ್ತಾಪಿಸಿ ಮಾತನಾಡಿ,
“ಸುಳ್ಯ ಒಂದು ಮೀಸಲು ಕ್ಷೇತ್ರ. ನಾವು ಇಲ್ಲಿ 60 ವರ್ಷಗಳಿಂದ ಇದ್ದೇವೆ. ಆದರೆ ಸುಳ್ಯಕ್ಕೊಂದು ಅಂಬೇಡ್ಕರ್ ಭವನವೂ ಇಲ್ಲ. ಸುಮಾರು 12–15 ವರ್ಷಗಳ ಹಿಂದೆ ಕಾಮಗಾರಿ ಆರಂಭಗೊಂಡಿದ್ದರೂ ಇನ್ನೂ ಪೂರ್ಣವಾಗಿಲ್ಲ. ನಿಮ್ಮ ನಿಗಮದ ವ್ಯಾಪ್ತಿಗೆ ಬರುವ ಎಲ್ಲ ಜನರೂ ಇಲ್ಲೇ ಇದ್ದಾರೆ. ಹಲವು ಬಾರಿ ಮನವಿ ಮಾಡಿದರೂ ಫಲವಾಗಿಲ್ಲ. ಮದುವೆ ಹಾಗೂ ಇತರ ಸಾಮಾಜಿಕ ಕಾರ್ಯಕ್ರಮಗಳಿಗೆ ನಾವು ಬೇರೆ ಸಮುದಾಯ ಭವನಗಳನ್ನು ಅವಲಂಬಿಸಬೇಕಾದ ಸ್ಥಿತಿಯಲ್ಲಿದ್ದೇವೆ. ಆದ್ದರಿಂದ ಸುಳ್ಯದಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗಬೇಕು,” ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಲ್ಲವಿ ಜಿ. ಅವರು ಕಠಿಣವಾಗಿ ಮಾತನಾಡುತ್ತಾ,
“ಅಂಬೇಡ್ಕರ್ ಭವನ ಆಗಿಲ್ಲವೆಂದರೆ ಅದು ತುಂಬಾ ನೋವಿನ ಸಂಗತಿ. ಆದರೆ ಇಷ್ಟು ವರ್ಷ ಸಹಿಸಿಕೊಂಡು ಬಂದಿದ್ದೀರಿ ಎಂದರೆ ತಪ್ಪು ನಿಮ್ಮಲ್ಲಿಯೇ ಇದೆ. ಸಹಿಸಿಕೊಂಡದ್ದೇ ತಪ್ಪು. 60 ವರ್ಷಗಳಿಂದ ಇಲ್ಲಿದ್ದೇವೆ ಎನ್ನುತ್ತೀರಾ, 12 ವರ್ಷಗಳಿಂದ ಕಾಮಗಾರಿ ನೆನೆಗುದಿಗೆ ಬಿದ್ದಿದೆ ಎನ್ನುತ್ತೀರಾ — ಆದರೆ ನಿಮ್ಮ ಹೋರಾಟ ಎಲ್ಲಿದೆ? ಇವತ್ತು ಸಮಸ್ಯೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರ ಮುಂದೆ ಬಂದು ನಿಂತಿದೆ. ಇಷ್ಟು ದೊಡ್ಡ ಸಮಸ್ಯೆ ಇದ್ದರೆ ನೀವು ಎಷ್ಟು ಎಚ್ಚೆತ್ತುಕೊಂಡಿದ್ದೀರಿ ಎಂದು ನಾನು ಪ್ರಶ್ನಿಸಲೇಬೇಕು,” ಎಂದು ಹೇಳಿದರು.
ಮುಂದುವರಿದು ಅವರು,
“ಜನಪ್ರತಿನಿಧಿಗಳು ಕೆಲಸ ಮಾಡುತ್ತಿಲ್ಲ ಎಂದು ಗೊತ್ತಾದ ಮೇಲೆ ನೀವು ಯಾರನ್ನಾದರೂ ಸಂಪರ್ಕಿಸಿ, ಒತ್ತಡ ತಂದು ಕೆಲಸ ಆಗಬೇಕಲ್ಲವೇ? ಯಾರು ಮಾಡಿಲ್ಲ ಎಂಬುದರ ಚರ್ಚೆಗೆ ಹೋಗುವುದಿಲ್ಲ. ಆದರೆ ಈಗಿನ ಸಮಾಜ ಕಲ್ಯಾಣ ಸಚಿವರ ಗಮನಕ್ಕೆ ಈ ವಿಷಯವನ್ನು ಖಂಡಿತವಾಗಿ ತರುತ್ತೇನೆ. ಸುಳ್ಯದ ಅಂಬೇಡ್ಕರ್ ಭವನ ಆಗುವಂತೆ ನಾನು ಮಾಡುವೆ. ನಮ್ಮ ಇಲಾಖೆ ನಿಮ್ಮ ಜತೆಗಿದೆ. ನೀವು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಮುಂದೆ ಬರಲು ವೇದಿಕೆ ಬೇಕು. ಅದರ ಭಾಗವೇ ಸಮುದಾಯ ಭವನ. ಸುಳ್ಯದ ಮೀಸಲು ಕ್ಷೇತ್ರದಲ್ಲಿ ಈ ರೀತಿಯ ಸ್ಥಿತಿ ಇದೆ ಎಂದರೆ ಕೇಳಲು ನಾಚಿಕೆ,” ಎಂದು ಕಠಿಣವಾಗಿ ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯಿಂದ ಮಾಹಿತಿ ಪಡೆದ ಅಧ್ಯಕ್ಷೆ ಪಲ್ಲವಿ ಜಿ.,
ಈಗಾಗಲೇ ₹2 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆದಿದೆ. ಉಳಿದಂತೆ ₹3.10 ಕೋಟಿ ಅನುದಾನ ಮಂಜೂರಾಗಿದೆ. ಈ ಕಾಮಗಾರಿ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಮೂಲಕ ನಡೆಯಬೇಕಾಗಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು. ಇಂಜಿನಿಯರ್ ವಿಭಾಗದವರು ತಾವು ಮಾಡಿದ ಫೈಲ್ ವರ್ಕ್ ಕುರಿತು ವಿವರ ನೀಡಿದರು.
ಸಭೆಯಲ್ಲಿ ಮತ್ತೊಂದು ಮಹತ್ವದ ವಿಷಯ ಪ್ರಸ್ತಾಪವಾಗಿದ್ದು, 2017ರಲ್ಲಿ ಸುಳ್ಯ ತಾಲೂಕಿನ ಪೆರುವಾಜೆ, ಅಜ್ಜಾವರ, ಉಬರಡ್ಕ ಮಿತ್ತೂರು, ನೆಲ್ಲೂರು ಕೆಮ್ರಾಜೆ ಸೇರಿದಂತೆ ಹಲವು ಕಡೆ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆದಿತ್ತು. ಆದರೆ ಯಾವುದೇ ಕಡೆ ಭವನ ನಿರ್ಮಾಣವಾಗಿಲ್ಲ. ಶಂಕುಸ್ಥಾಪನೆಯ ಫಲಕಗಳು ಮಾತ್ರ ಉಳಿದಿವೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ನಂದರಾಜ ಸಂಕೇಶ್ ಮತ್ತಿತರರು ಅಧ್ಯಕ್ಷರ ಗಮನಕ್ಕೆ ತಂದರು.
ಈ ಕುರಿತು ಚರ್ಚೆ ನಡೆದು, ವಿಷಯದ ಸಮಗ್ರ ಪರಿಶೀಲನೆ ನಡೆಸಿ ಪ್ರೊಸಿಡಿಂಗ್ ಸಹಿತ ವರದಿ ಸಲ್ಲಿಸುವಂತೆ ಅಧ್ಯಕ್ಷೆ ಪಲ್ಲವಿ ಜಿ. ಅವರು ತಹಶೀಲ್ದಾರ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ವಿಮುಕ್ತ ಬುಡಕಟ್ಟು ಒಕ್ಕೂಟದ ರಾಜ್ಯ ಜಂಟಿ ಕಾರ್ಯದರ್ಶಿ ಬಿ.ಎಸ್. ಆನಂದ್ ಏಕಲವ್ಯ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ತಾಲ್ಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ತಹಶೀಲ್ದಾರ್ ಎಂ. ಮಂಜುಳ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೃಷ್ಣ ಬಿ., ಕರ್ನಾಟಕ ಪ.ಜಾ, ಪ.ಪಂ. ಅಲೆಮಾರಿ ಅಭಿವೃದ್ಧಿ ನಿಗಮದ ಜಿಲ್ಲಾ ಸಮಿತಿ ಸದಸ್ಯ ಮಹೇಶ್ ಬೆಳ್ಳಾರ್ಕರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

