ಮಹಾರಾಷ್ಟ್ರ, ಬಿಜೆಪಿಯ ಮೇಯರ್ ಕನಸು ಭಗ್ನ
ಪ್ರಜಾವಾರ್ತೆ:
ಜ.21 – ಮುಂಬೈ ಮೇಯರ್ ಪಟ್ಟಕ್ಕಾಗಿ ರಾಜ್ ಠಾಕ್ರೆಯ ಎಂಎನ್ಎಸ್ ಜೊತೆ ಶಿಂಧೆ ಶಿವಸೇನಾ ಮೈತ್ರಿ!
ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಿದ್ದ ನಂತರ, ಮಹಾರಾಷ್ಟ್ರ ರಾಜಕಾರಣದಲ್ಲಿ ಕೆಲವು ಅಚ್ಚರಿಯ ಬೆಳವಣಿಗೆಗಳು ನಡೆಯತ್ತಿದೆ.
ಕ್ಷಣಕ್ಷಣಕ್ಕೂ ಮೈತ್ರಿಕೂಟಗಳ ನಿಲುವುಗಳು ಬದಲಾಗತೊಡಗಿದ್ದು ದಿನೇ ದಿನೆ ಕುತೂಹಲ ಕೆರಳಿಸುವಂತಿದೆ.
122 ಸದಸ್ಯ ಬಲದ, ಏಕನಾಥ್ ಶಿಂದೆ ಭದ್ರಕೋಟೆ ಎಂದೇ ಪರಿಗಣಿಸಲಾಗಿರುವ ಕಲ್ಯಾಣ್-ಡೊಂಬಿವಿಲಿ ನಗರ ಪಾಲಿಕೆ ಚುನಾವಣೆಯಲ್ಲಿ 50 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ, ಬಿಜೆಪಿ ಪ್ರಬಲ ಪ್ರದರ್ಶನವನ್ನೇ ನೀಡಿತ್ತು. ಮತ್ತೊಂದೆಡೆ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ 53 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು ಹಾಗೂ ಎಂಎನ್ಎಸ್ 5 ಸ್ಥಾನಗಳಲ್ಲಿ ಜಯ ದಾಖಲಿಸಿತ್ತು. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣ 11 ಸ್ಥಾನಗಳನ್ನು ಗೆದ್ದಿತ್ತು. ಕಲ್ಯಾಣ್-ಡೊಂಬಿವಿಲಿ ನಗರ ಪಾಲಿಕೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಮ್ಯಾಜಿಕ್ ನಂಬರ್ 62 ಆಗಿದೆ.
ಆದರೆ, ಮಹಾಯುತಿ ಸರಕಾರದಲ್ಲಿ ಬಿಜೆಪಿ ಹಾಗೂ ಏಕನಾಥ್ ಶಿಂದೆಯ ಶಿವಸೇನೆ ಮಿತ್ರ ಪಕ್ಷಗಳಾಗಿದ್ದರೂ, ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಹಾಗೂ ರಾಜ್ ಠಾಕ್ರೆ ನೇತೃತ್ವದ ಎಂಎನ್ಎಸ್ ಕಲ್ಯಾಣ್-ಡೊಂಬಿವಿಲಿ ನಗರ ಪಾಲಿಕೆ ಮೇಯರ್ ಹುದ್ದೆಯನ್ನು ವಶಪಡಿಸಿಕೊಳ್ಳಲು ಒಂದಾಗಿವೆ.
ಕೊಂಕಣ ಭವನದಲ್ಲಿ ನಡೆದ ಸಭೆಯ ನಂತರ, ಏಕನಾಥ್ ಶಿಂದೆಯ ಪುತ್ರ ಹಾಗೂ ಶಿವಸೇನೆ ಸಂಸದ ಶ್ರೀಕಾಂತ್ ಶಿಂದೆ ರಾಜ್ ಠಾಕ್ರೆ ಪಕ್ಷದೊಂದಿಗಿನ ಮೈತ್ರಿಯನ್ನು ದೃಢಪಡಿಸಿದ್ದಾರೆ. ಇದರಿಂದಾಗಿ ಶಿವಸೇನೆ-ಎಂಎನ್ಎಸ್ ಮೈತ್ರಿಕೂಟದ ಸಂಖ್ಯೆ 58ಕ್ಕೆ ಏರಿಕೆಯಾದಂತಾಗಿದೆ. ಉದ್ಧವ್ ಠಾಕ್ರೆ ನೇತೃತ್ವದ ಕೆಲ ಕಾರ್ಪೊರೇಟರ್ ಗಳೂ ಈ ಮೈತ್ರಿಕೂಟಕ್ಕೆ ಬೆಂಬಲ ನೀಡುವ ಸಾಧ್ಯತೆ ಇದ್ದು, ಈ ಮೈತ್ರಿಕೂಟ ಬಿಜೆಪಿಯನ್ನು ಮೇಯರ್ ಪಟ್ಟದಿಂದ ಹೊರಗಿಡುವುದು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ.

