ಬಿ.ಆರ್.ಎಸ್ ಪಕ್ಷದಿಂದ ಹೊರಹಾಕಲ್ಪಟ್ಟ ಕೆ. ಕವಿತಾರಿಂದ ತೆಲಂಗಾಣದಲ್ಲಿ ಹೊಸ ಪಕ್ಷ ರಚನೆ ! ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ರೊಂದಿಗೆ ಚರ್ಚಿಸಿದ ಕವಿತಾ.

ಪ್ರಜಾವಾರ್ತೆ.
ಜ.21: ಹೈದರಾಬಾದ್: ಮಾಜಿ ಮುಖ್ಯಮಂತ್ರಿ ಹಾಗೂ ಬಿಆರ್‌ಎಸ್ ಪಕ್ಷದ ಅಧ್ಯಕ್ಷ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ಅವರು ಹೊಸ ಪಕ್ಷ ಕಟ್ಟಲು ಮುಂದಾಗಿರುವ ಮಾಹಿತಿ ತಿಳಿದು ಬಂದಿರುತ್ತದೆ. ಈ ಕುರಿತು ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.

ಕವಿತಾರವರು ಇದೀಗ ತೆಲಂಗಾಣ ಜಾಗೃತಿ ಸಂಘಟನೆಯ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದು ಅವರು, ಬಲಿಷ್ಠ ಪಕ್ಷ ಕಟ್ಟಿ ಆ ಮೂಲಕ ಮತ್ತೆ ಚುನಾವಣಾ ಅಖಾಡಕ್ಕೆ ಧುಮುಕಲು ಮುಂದಾಗಿದ್ದಾರೆ.

ಇದರ ಪೂರ್ವ ತಯಾರಿಗಾಗಿ ಇತ್ತೀಚೆಗೆ ಹೈದರಾಬಾದ್‌ನಲ್ಲಿ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋ‌ರ್ ಅವರೊಂದಿಗೆ ಮೊದಲ ಸುತ್ತಿನ ಮಾತುಕತೆ ನಡೆಸಿದ್ದಾರೆಂದು ವರದಿಯಾಗಿದೆ. ರಾಜಕೀಯ ಪಕ್ಷ ಸ್ಥಾಪನೆ, ಕಾರ್ಯತಂತ್ರ, ಪರಿಣಾಮಕಾರಿಯಾಗಿ ಪಕ್ಷ ಸಂಘಟನೆ ಕುರಿತಂತೆ ಪ್ರಶಾಂತ್ ಕಿಶೋ‌ರ್ ಜತೆ ಕವಿತಾ ಮಾತನಾಡಿದ್ದಾರೆ. ಈ ಬಗ್ಗೆ ಸಲಹೆಗಳನ್ನು ಪಡೆದಿದ್ದಾರೆ ಎಂದು ತೆಲಂಗಾಣ ಜಾಗೃತಿ ಮೂಲಗಳು ತಿಳಿಸಿವೆ.

ಈ ಹಿಂದೆ ಕವಿತಾ ಅವರನ್ನು ಸೆಪ್ಟೆಂಬರ್ 2025ರಲ್ಲಿ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು.

ಬಿಆರ್‌ಎಸ್‌ ಆಡಳಿತದ ಅವಧಿಯಲ್ಲಿ ಸಹೋದರ ಸಂಬಂಧಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರು. ಆ ಮೂಲಕ ತಮ್ಮ ತಂದೆಯ ವರ್ಚಸ್ಸಿಗೆ ಕಳಂಕ ತಂದಿದ್ದಾರೆ ಎಂದು ಕವಿತಾ ಆರೋಪಿಸಿದ್ದರು.

‘ಮುಂದೊಂದು ದಿನ ನಾನೂ ಮುಖ್ಯಮಂತ್ರಿಯಾಗುತ್ತೇನೆ. ಬಿಆರ್‌ಎಸ್‌ ಮತ್ತು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರ ಮತ್ತು ಅಕ್ರಮಗಳನ್ನು ಬಯಲಿಗೆಳೆಯುತ್ತೇನೆ’ ಎಂದು ಇತ್ತೀಚೆಗೆ ಕವಿತಾ ಹೇಳಿದ್ದು ಸುದ್ದಿಯಾಗಿತ್ತು.

Leave a Reply

Your email address will not be published. Required fields are marked *