ಅಮೆರಿಕದಲ್ಲಿ ನಡೆದ ಭೀಕರ ಅಪಘಾತದಲ್ಲಿ ಆಂಧ್ರಪ್ರದೇಶ ಮೂಲದ ದಂಪತಿಗಳಿಬ್ಬರೂ ಮೃತ್ಯು,ಕಾರಿನಲ್ಲಿದ್ದ ಮಕ್ಕಳಿಬ್ಬರಿಗೆ ಗಾಯ
ವಾಷಿಂಗ್ಟನ್: ಅಮೆರಿಕದಲ್ಲಿ ನೆಲೆಸಿದ್ದ ಆಂಧ್ರಪ್ರದೇಶದ ದಂಪತಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಪಾಲಕೊಲ್ಲು ಮೂಲದ ಕೆ.ಕೃಷ್ಣ ಕಿಶೋರ್ (49) 1999ರಲ್ಲಿ ಅಮೆರಿಕಕ್ಕೆ ತೆರಳಿದ್ದರು, ನಂತರ ಕಾಕಿನಾಡ ಮೂಲದ ಆಶಾ (45) ಅವರನ್ನು ಮದುವೆಯಾಗಿದ್ದರು.

ಸಾಫ್ಟ್‌ವೇರ್ ಎಂಜಿನಿಯರ್ ಆದ ಕೃಷ್ಣ ಕಿಶೋರ್ ಮತ್ತು ಪತ್ನಿ ಆಶಾ ಮೃತ ದುರ್ದೈವಿಗಳೆಂದು ತಿಳಿದು ಬಂದಿದೆ. ವಾಷಿಂಗ್ಟನ್‌ನಲ್ಲಿ ಈ ಅಪಘಾತ ಸಂಭವಿಸಿದ್ದು ತಮ್ಮ ಇಬ್ಬರು ಮಕ್ಕಳೊಂದಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಈ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಕೃಷ್ಣ ಕಿಶೋರ್ ಮತ್ತು ಪತ್ನಿ ಆಶಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪುತ್ರ ಮತ್ತು ಪುತ್ರಿಯರಿಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಈ ದಂಪತಿಗೆ ಇಬ್ಬರು ಮಕ್ಕಳು, ಒಬ್ಬ ಮಗ ಮತ್ತು ಒಬ್ಬ ಮಗಳು, ಕಿಶೋರ್ ಅವರ ಸಹೋದರಿ ಕೂಡ ಅಮೆರಿಕದಲ್ಲಿ ನೆಲೆಸಿದ್ದಾರೆ. ದೃಷ್ಟಿ ದೋಷ ಹೊಂದಿರುವ ಕಿಶೋರ್ ಅವರ ತಂದೆ ಪುರುಷೋತ್ತಮ್ ಮತ್ತು ಅವರ ತಾಯಿ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರ ಸಂಬಂಧಿ ಮಾರುತಿ ರಾಮ್ ಮಾತನಾಡಿ, ದಂಪತಿ ಡಿಸೆಂಬರ್ 23 ರಂದು ಭಾರತಕ್ಕೆ ಆಗಮಿಸಿದ್ದರು ಮತ್ತು ನಂತರ ಯುಎಸ್ ಗೆ ಮರಳುವ ಮೊದಲು ಹೊಸ ವರ್ಷವನ್ನು ಆಚರಿಸಲು ದುಬೈಗೆ ಪ್ರಯಾಣಿಸಿದ್ದರು.
ದಂಪತಿಗಳು ದುಬೈನಿಂದ ಯುಎಸ್ ಗೆ ಹೋಗುವ ವಿಮಾನ ತಪ್ಪಿ ಹೋಗಿತ್ತು, ಹಾಗಾಗಿ ಬೇರೆ ಸ್ಥಳಕ್ಕೆ ಮತ್ತೊಂದು ವಿಮಾನವನ್ನು ಕಾಯ್ದಿರಿಸಿದರು ಮತ್ತು ಅಲ್ಲಿಂದ ಕಾರಿನಲ್ಲಿ ಮನೆಗೆ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ರಾಮ್ ಹೇಳಿದರು.
“ದಂಪತಿಗಳು ತಮ್ಮ ಇಬ್ಬರು ಮಕ್ಕಳೊಂದಿಗೆ ಕಾರಿನಲ್ಲಿದ್ದಾಗ ತಪ್ಪು ದಿಕ್ಕಿನಲ್ಲಿ ಬರುತ್ತಿದ್ದ ಟ್ರಕ್ ಡಿಕ್ಕಿ ಹೊಡೆದಿದೆ. ಮಕ್ಕಳು ಬದುಕುಳಿದಿದ್ದಾರೆ ಮತ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ” ಎಂದು ರಾಮ್ ತಿಳಿಸಿದ್ದಾರೆ.
ಮಕ್ಕಳಾದ 21 ವರ್ಷದ ಮಗಳು ಮತ್ತು 16 ವರ್ಷದ ಮಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಇಬ್ಬರೂ ಪೋಷಕರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.
ಭಾರತೀಯ ಕಾಲಮಾನ ಭಾನುವಾರ ಮಧ್ಯಾಹ್ನ ಈ ಅಪಘಾತ ಸಂಭವಿಸಿದ್ದು, ಸಂಜೆ ಕುಟುಂಬಕ್ಕೆ ಮಾಹಿತಿ ನೀಡಲಾಯಿತು. ದಂಪತಿಗಳ ಅಂತ್ಯಕ್ರಿಯೆಯನ್ನು ಅಮೆರಿಕದಲ್ಲಿ ನಡೆಸಲಾಗುವುದು ಎಂದು ರಾಮ್ ಹೇಳಿದರು.
ಮೃತ ದುರ್ದೈವಿ ದಂಪತಿಗಳಿಬ್ಬರು ಉಧ್ಯೋಗದ ನಿಮಿತ್ತ ಕೆಲವು ವರ್ಷಗಳಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದರುವುದಾಗಿಯೂ. ಕೇವಲ 10 ದಿನಗಳ ಹಿಂದೆ ಆಂಧ್ರಪ್ರದೇಶದ ಪಾಲಕೊಲ್ಲುವಿನ ತಮ್ಮ ಮನೆಗೆ ಭೇಟಿ ನೀಡಿ ವಾಪಾಸ್ಸಾಗಿದ್ದರು ಎಂದು ತಿಳಿದು ಬಂದಿದೆ. ಕಾರಿನಲ್ಲಿದ್ದ ಅವರ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿರುತ್ತಾರೆ.

