ಸಾಮೂಹಿಕ ಸಮಾಧಿ ಆರೋಪ: ‘ಧರ್ಮಸ್ಥಳ ದೇವಾಲಯ’ ದಿಂದ ಕೋರ್ಟ್ ಗೆ ಅರ್ಜಿ ಸಲ್ಲಿಕೆ !

ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನದ ಪರ ಕೆಲ ವಕೀಲರು ಬುಧವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುತ್ತಾರೆ.

ಸಾಮೂಹಿಕ ಸಮಾಧಿ ಪ್ರಕರಣದಲ್ಲಿ ಸಂತ್ರಸ್ತನ ಸ್ಥಾನದಲ್ಲಿ ಪ್ರತಿನಿಧಿಸಲು ಅನುಮತಿ ನೀಡಬೇಕೆಂದು ಕೋರಿದ್ದಾರೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 2 (ವೈ) ಅಡಿಯಲ್ಲಿ ದೇವಸ್ಥಾನದ ಪರವಾಗಿ ವಕೀಲ ಮಹೇಶ್ ಕಜೆ ಅವರು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಟಿ.ಎಚ್. ವಿಜಯೇಂದ್ರ ಅವರಿಗೆ ಅರ್ಜಿ ಸಲ್ಲಿಸಿರುತ್ತಾರೆ.

ದೇವಾಲಯದ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್, ಮೃತದೇಹಗಳ ಸಾಮೂಹಿಕ ಅಂತ್ಯಸಂಸ್ಕಾರದ ಬಗ್ಗೆ ತನಿಖೆ ನಡೆಸುವಂತೆ ಮಾಜಿ ಸುಚಿತ್ವ ಕಾರ್ಯಕರ್ತ ಸಿ.ಎನ್.ಚೆನ್ನಯ್ಯ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು ಮತ್ತು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಪ್ರತಿವಾದಿಯಾಗಿ ಸೇರಿಸಿದ್ದರು.

ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಿತ್ತು ಎಂದು ಹೇಳಿದರು. ನ್ಯಾಯಾಲಯದ ಹೊರಗೆ ನ್ಯಾಯವಾದಿ ಮಹೇಶ್ ಕಜೆ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಸಾಮೂಹಿಕ ಸಮಾಧಿ ಪ್ರಕರಣದಲ್ಲಿ ದೇವಾಲಯವು ಸಂತ್ರಸ್ತನಾಗಿ ನ್ಯಾಯಾಲಯದ ವಿಚಾರಣೆಯಲ್ಲಿ ಭಾಗವಹಿಸಲು ಅವಕಾಶ ಕೊಡಬೇಕು ಎಂದು ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದರು.

ಈ ಕಾರಣದಿಂದಾಗಿ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಜನವರಿ 3ಕ್ಕೆ ಮುಂದೂಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ದಶಕದ ಹಿಂದೆ ನಡೆದ ಅತ್ಯಾಚಾರ ಮತ್ತು ವಿವಿಧ ಹತ್ಯೆಗಳಿಗೆ ಬಲಿಯಾದವರ ಶವಗಳನ್ನು ಬಲವಂತದಿಂದ ಹೂತು ಹಾಕಿದ್ದೇನೆ ಎಂದು ಧರ್ಮಸ್ಥಳದ ಮಾಜಿ ಸ್ವಛ್ಚತಾ ಕಾರ್ಯಕರ್ತ ಆರೋಪಿಸಿದ್ದರು. ಆದರೆ ನಂತರ ಆತನನ್ನು ಸುಳ್ಳು ಹೇಳಿಕೆಯ ಆರೋಪದ ಮೇಲೆ ಬಂಧಿಸಿ ಶಿವಮೊಗ್ಗ ಜೈಲಿಗೆ ಕಳುಹಿಸಲಾಗಿತ್ತು. ಇದಾದ ನಂತರ ಎರಡು ವಾರಗಳ ಹಿಂದಷ್ಟೇ ಅವರಿಗೆ ಜಾಮೀನು ದೊರಕಿತು.

ಈ ಘಟನೆಗಳ ಮಧ್ಯೆ SIT ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ದೂರುದಾರರಾದ ಸಿ ಎನ್ ಚೆನ್ನಯ್ಯ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ್ ಗೌಡ, ಜಯಂತ್ ಟಿ ಮತ್ತು ಸುಜಾತಾ ಗೌಡ ಸೇರಿದಂತೆ 6 ಜನರನ್ನು ಆರೋಪಿಗಳೆಂದು ಹೆಸರಿಸಿದೆ.

ಧರ್ಮಸ್ಥಳ ದೇವಾಲಯದ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಕಾರಣಕ್ಕೆ ಮುಂದಿನ SIT ನಡೆ ಕುತೂಹಲಕ್ಕೆಡೆಮಾಡಿದೆ.

Leave a Reply

Your email address will not be published. Required fields are marked *