ಭಾರತದಿಂದ ಬ್ರಹ್ಮೋಸ್ ಕ್ಷಿಪಣಿಗಳನ್ನು ಖರೀದಿಸಲು ವಿಯೆಟ್ನಾಂ ಮತ್ತು ಇಂಡೋನೇಷ್ಯಾ ₹4,000 ಕೋಟಿ ಒಪ್ಪಂದ
ನವದೆಹಲಿ: ಭಾರತವು ವಿಯೆಟ್ನಾಂ ಮತ್ತು ಇಂಡೋನೇಷ್ಯಾ ಜೊತೆ ಬ್ರಹ್ಮೋಸ್ ಕ್ಷಿಪಣಿ ಒಪ್ಪಂದಗಳನ್ನು ಅಂತಿಮಗೊಳಿಸುವ ಅಂತಿಮ ಹಂತದಲ್ಲಿದೆ, ಇದು ತನ್ನ ರಕ್ಷಣಾ ರಫ್ತಿನಲ್ಲಿ ಪ್ರಮುಖ ಉತ್ತೇಜನಕ್ಕೆ ದಾರಿ ಮಾಡಿಕೊಡುತ್ತದೆ. ಈ ಒಪ್ಪಂದವು ಸುಮಾರು 4,000 ಕೋಟಿ ರೂ.ಗಳ ಮೌಲ್ಯದ್ದಾಗಿದೆ ಎಂದು ವರದಿಯಾಗಿದೆ. ಬ್ರಹ್ಮೋಸ್ ಪಾಲುದಾರ ರಷ್ಯಾ ಕೂಡ ಎರಡೂ ದೇಶಗಳಿಗೆ ಕ್ಷಿಪಣಿಗಳನ್ನು ವರ್ಗಾಯಿಸಲು ಒಪ್ಪಿಗೆ ನೀಡಿದ ನಂತರ ಈ ಒಪ್ಪಂದವು ವಾಸ್ತವವಾಗಲಿದೆ.

ಡಿಸೆಂಬರ್ 4 ರಂದು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಷ್ಯಾದ ರಕ್ಷಣಾ ಸಚಿವ ಆಂಡ್ರೇ ಬೆಲೌಸೊವ್ ನಡುವಿನ ಸಭೆಯಲ್ಲಿ ರಷ್ಯಾ ಈ ಬಗ್ಗೆ ಮೌಖಿಕ ಭರವಸೆ ನೀಡಿತ್ತು. ಮಾಸ್ಕೋದಿಂದ ಶೀಘ್ರದಲ್ಲೇ ಅಧಿಕೃತ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಸ್ವೀಕರಿಸಲಾಗುವುದು ಎಂದು ವರದಿಯಾಗಿದೆ.
ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಉಪಸ್ಥಿತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತದಿಂದ ಬ್ರಹ್ಮೋಸ್ ಕ್ಷಿಪಣಿಗಳನ್ನು ಖರೀದಿಸಲು ಎರಡೂ ದೇಶಗಳು ಯೋಜಿಸುತ್ತಿವೆ. ದಕ್ಷಿಣ ಚೀನಾ ಸಮುದ್ರದಲ್ಲಿ ತಮ್ಮ ಹಕ್ಕುಗಳ ಕುರಿತು ವಿಯೆಟ್ನಾಂ ಮತ್ತು ಇಂಡೋನೇಷ್ಯಾ ವಿವಾದಗಳನ್ನು ಹೊಂದಿವೆಯಾಗೊದ್ದರೂ, ಕರಾವಳಿ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಎರಡೂ ದೇಶಗಳು ಭಾರತೀಯ ಶಸ್ತ್ರಾಸ್ತ್ರಗಳನ್ನು ಖರೀದಿಸಲು ತೀರ್ಮಾನಿಸಿವೆ.
ಎರಡೂ ದೇಶಗಳೊಂದಿಗಿನ ಬ್ರಹ್ಮೋಸ್ ಒಪ್ಪಂದವು ಭಾರತವು ಆಸಿಯಾನ್ ದೇಶಗಳ ಪ್ರಮುಖ ರಕ್ಷಣಾ ಪಾಲುದಾರನಾಗಿ ಹೊರಹೊಮ್ಮಲು ಕೂಡಾ ಸಹಾಯ ಮಾಡುವಂತದ್ದಾಗಿದೆ.
ಬ್ರಹ್ಮೋಸ್ ವಿಶ್ವದ ಅತ್ಯುತ್ತಮ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಗಳಲ್ಲಿ ಒಂದಾಗಿದ್ದು, ಇದು ಧ್ವನಿಯ ವೇಗಕ್ಕಿಂತ ಮೂರು ಪಟ್ಟು ವೇಗದಲ್ಲಿ (mach 2.8) ಚಲಿಸಬಲ್ಲದು. ಭಾರತವು ಎರಡೂ ದೇಶಗಳಿಗೆ 290 ಕಿ.ಮೀ.ವರೆಗಿನ ವ್ಯಾಪ್ತಿಯ ಕ್ಷಿಪಣಿಗಳನ್ನು ಒದಗಿಸಲಿದೆ. ಭಾರತದಿಂದ ಬ್ರಹ್ಮೋಸ್ ಖರೀದಿಸಿದ ಮೊದಲ ದೇಶ ಫಿಲಿಪೈನ್ಸ್. ಇದರ ನಂತರ ಇತರ ದೇಶಗಳು ಸಹ ಕ್ಷಿಪಣಿಯನ್ನು ಖರೀದಿಸಲು ಮುಂದೆ ಬರುತ್ತಿವೆ.
ಮೇ 2024 ರಲ್ಲಿ ನಡೆದ ‘ಆಪರೇಷನ್ ಸಿಂಧೂರ್’ ಮಿಲಿಟರಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ನಿದ್ರೆಗೆಡಿಸಿದ ಅಸ್ತ್ರ ಬ್ರಹ್ಮೋಸ್ ಆಗಿದೆ. ಸುಖೋಯ್ -30 ಎಂಕೆಐ ವಿಮಾನದಿಂದ ಹಾರಿಸಲಾದ ಬ್ರಹ್ಮೋಸ್ ಕ್ಷಿಪಣಿಗಳು ಪಾಕಿಸ್ತಾನಿ ಮಿಲಿಟರಿ ನೆಲೆಗಳನ್ನು ನಾಶಪಡಿಸಿದವು. 800 ಕಿಮೀ ವ್ಯಾಪ್ತಿಯನ್ನು ಹೊಂದಿರುವ ಬ್ರಹ್ಮೋಸ್ನ ಹೊಸ ಆವೃತ್ತಿಯನ್ನು ಸಹ 2028 ರ ವೇಳೆಗೆ ಉಡಾವಣೆ ಮಾಡಲಾಗುವುದು.
ಬ್ರಹ್ಮೋಸ್ ಹೊರತುಪಡಿಸಿ, ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಇತರ ಶಸ್ತ್ರಾಸ್ತ್ರಗಳಿಗೂ ಹೆಚ್ಚಿನ ಬೇಡಿಕೆಯಿದೆ ಎಂದು ಹೇಳಲಾಗುತ್ತಿದೆ. ಆಕಾಶ್ ವಾಯು ರಕ್ಷಣಾ ವ್ಯವಸ್ಥೆ, ಪಿನಾಕಾ ಮಲ್ಟಿ-ಬ್ಯಾರೆಲ್ ರಾಕೆಟ್ ವ್ಯವಸ್ಥೆ ಮತ್ತು ಅಡ್ವಾನ್ಸ್ಡ್ ಟೋವ್ಡ್ ಆರ್ಟಿಲರಿ ಗನ್ ಹೆಚ್ಚಿನ ವಿಚಾರಣೆಗಳನ್ನು ಪಡೆಯುತ್ತಿವೆ. ಅರ್ಮೇನಿಯಾ ಪ್ರಸ್ತುತ ಆಕಾಶ್ ವಾಯು ರಕ್ಷಣಾ ವ್ಯವಸ್ಥೆಯನ್ನು ಹೊಂದಿದ್ದು, ಇದು ಡ್ರೋನ್ಗಳು ಮತ್ತು ವಿಮಾನಗಳನ್ನು ನಾಶಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರ ಜೊತೆಗೆ, ಅರ್ಮೇನಿಯಾ ಪಿನಾಕಾ ರಾಕೆಟ್ ವ್ಯವಸ್ಥೆಯನ್ನು ಸಹ ಖರೀದಿಸಿದೆ. ವಿಯೆಟ್ನಾಂ, ಬ್ರೆಜಿಲ್ ಮತ್ತು ಯುಎಇಯಂತಹ ದೇಶಗಳು ಸಹ ಪಿನಾಕಾದಲ್ಲಿ ಆಸಕ್ತಿ ವ್ಯಕ್ತಪಡಿಸಿವೆ. ಭಾರತ ಅಭಿವೃದ್ಧಿಪಡಿಸುತ್ತಿರುವ ಹೊಸ ಶಕ್ತಿಶಾಲಿ ಪಿನಾಕಾದಲ್ಲಿ ಫ್ರೆಂಚ್ ಸೈನ್ಯವೂ ಆಸಕ್ತಿ ವ್ಯಕ್ತಪಡಿಸಿದೆ ಎಂದು ತಿಳಿದು ಬಂದಿದೆ.
2024-25ನೇ ಹಣಕಾಸು ವರ್ಷದಲ್ಲಿ ಭಾರತದ ರಕ್ಷಣಾ ರಫ್ತು 23,622 ಕೋಟಿ ರೂ.ಗಳ ಐತಿಹಾಸಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಕಳೆದ ಹತ್ತು ವರ್ಷಗಳಲ್ಲಿ ಈ ವಲಯದಲ್ಲಿ ಇದು 31 ಪಟ್ಟು ಹೆಚ್ಚಳವಾಗಿದ್ದು. ‘ಆತ್ಮನಿರ್ಭರ ಭಾರತ್’ ಯೋಜನೆಯ ಮೂಲಕ 2029 ರ ವೇಳೆಗೆ ರಫ್ತುಗಳನ್ನು 50,000 ಕೋಟಿ ರೂ.ಗಳಿಗೆ ಹೆಚ್ಚಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ತಿಳಿದು ಬಂದಿದೆ.

