ಗೌರಿ ಲಂಕೇಶ್ ಹತ್ಯೆ ಅಪರಾಧಿಗೆ ಮಹಾರಾಷ್ಟ್ರ ಮುನಿಸಿಪ್ಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಗೆಲುವು

ಗೌರಿ ಲಂಕೇಶ್ ಹತ್ಯೆಯ ಅಪರಾಧಿ ಶ್ರೀಕಾಂತ್ ಪಂಗಾರ್ಕರ್ ಮಹಾರಾಷ್ಟ್ರದ ಜಲ್ನಾ ಮುನಿಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿರುತ್ತಾರೆ. ವಾರ್ಡ್ ಸಂಖ್ಯೆ 13-ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಪಂಗಾರ್ಕರ್ ಬಿಜೆಪಿ ಅಭ್ಯರ್ಥಿ ರಾವುಸಾಹೇಬ್ ಧೋಬ್ಲೆಯನ್ನು ಸೋಲಿಸಿದರು. ಪಂಗಾರ್ಕರ್ 2,661 ಮತಗಳನ್ನು ಗಳಿಸಿದಾಗ ಧೋಬ್ಲೆಗೆ 2,477 ಮತಗಳು ಮಾತ್ರ ದೊರೆತಿವೆ.

ಮಾಜಿ ಶಿವಸೇನಾ ಸದಸ್ಯನಾದ ಪಂಗಾರ್ಕರ್‌ 2001 ರಿಂದ 2006 ರವರೆಗೆ ಅವಿಭಜಿತ ಶಿವಸೇನೆಯ ಕೌನ್ಸಿಲರಾಗಿದ್ದರು.  2011-ಲ್ಲಿ ಪಕ್ಷ ಟಿಕೆಟ್ ನಿರಾಕರಿಸಿದ ನಂತರ ಅವರು ತೀವ್ರ ಹಿಂದುತ್ವ ಸಂಘಟನೆಯಾದ ‘ಹಿಂದೂ ಜನಜಾಗ್ರತಿ ಸಮಿತಿ’ಯಲ್ಲಿ ಸೇರಿಕೊಂಡರು.

ಈ ಬಾರಿ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ಪಂಗಾರ್ಕರ್ ವಿರುದ್ಧ ಅಭ್ಯರ್ಥಿಯನ್ನು ನಿಲ್ಲಿಸಲು ಸಿದ್ಧರಿರಲಿಲ್ಲ. ಆದರೆ ಬಿಜೆಪಿ ಸೇರಿದಂತೆ ಇತರ ಎಲ್ಲಾ ಪ್ರಮುಖ ಪಕ್ಷಗಳು ಅವರ ವಿರುದ್ಧ ಸ್ಪರ್ಧಿಸಿದ್ದವು.

ಶ್ರೀಕಾಂತ್ ಒಬ್ಬ ಕ್ರಿಮಿನಲ್ ಆರೋಪಿ ಎಂಬ ಕಾರಣಕ್ಕೆ ಆತನ ವಿಜಯೋತ್ಸವ ಆಚರಿಸುತ್ತಿರುವುದಕ್ಕೆ ಹಲವು ಕಡೆಗಳಿಂದ ತೀವ್ರ ಟೀಕೆಗಳು ವ್ಯಕ್ತವಾಗುತ್ತಿದೆ. ಆದರೆ, ಗೆಲುವಿನ ನಂತರ ಪ್ರತಿಕ್ರಿಯಿಸಿದ ಶ್ರೀಕಾಂತ್, ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ತಮ್ಮ ವಿರುದ್ಧ ಇನ್ನೂ ಯಾವುದೇ ಆರೋಪಗಳನ್ನು ದೃಢಪಟ್ಟಿಲ್ಲ ಮತ್ತು ಕಾನೂನು ಕ್ರಮಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.

ಹಿರಿಯ ಪತ್ರಕರ್ತೆ ಮತ್ತು ಕಾರ್ಯಕರ್ತೆ ಗೌರಿ ಲಂಕೇಶ್ ಅವರನ್ನು ಸೆಪ್ಟೆಂಬರ್ 5, 2017 ರಂದು ಬೆಂಗಳೂರಿನಲ್ಲಿರುವ ಅವರ ಮನೆಯ ಮುಂದೆಯೇ ಗುಂಡಿಕ್ಕಿ ಕೊಲ್ಲಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 2018 ರಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಪಂಗಾರ್ಕರ್ ಅವರನ್ನು ಬಂಧಿಸಿತ್ತು. ಅವರ ಮೇಲೆ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಯಿತು.

ಸುಮಾರು ಏಳು ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದ ಪಂಗಾರ್ಕರ್ ಗೆ ಸೆಪ್ಟೆಂಬರ್ 4, 2024 ರಂದು ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿತು. ಈ ಹಿಂದೆ, ಅವರನ್ನು ಶಿವಸೇನೆ (ಶಿಂಧೆ ಬಣ)ಕ್ಕೆ ಮತ್ತೆ ಸೇರಿಸಿಕೊಳ್ಳುವ ಪ್ರಯತ್ನ ನಡೆದಿತ್ತು, ಆದರೆ ವ್ಯಾಪಕ ಸಾರ್ವಜನಿಕ ಆಕ್ರೋಶದ ನಂತರ ಪಕ್ಷವು ಈ ನಿರ್ಧಾರವನ್ನು ರದ್ದುಗೊಳಿಸಿತ್ತು.

Leave a Reply

Your email address will not be published. Required fields are marked *