ಕಗ್ಗಾಂಟ್ಟಾಗಿದ್ದ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷತೆಗೆ ಡಿ.ಕೆ.ಶಿ.ಯಿಂದ ತಯಾರಾಗಿದೆಯಾ ಹೊಸ ಫಾರ್ಮುಲಾ ?!

ಪ್ರಜಾವಾರ್ತೆ :ಜ11
ಕಗ್ಗಾಂಟ್ಟಾಗಿದ್ದ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷತೆ ಪರಿಹಾರಕ್ಕಾಗಿ ಡಿ.ಕೆ.ಶಿ.ಯಿಂದ ಹೊಸ ಫಾರ್ಮುಲಾವೊಂದು ತಯಾರಾಗಿದೆಯೆಂದು ತಿಳಿದು ಬಂದಿದೆ.

ಸುಮಾರು ಹದಿನೈದು ತಿಂಗಳುಗಳಿಂದ ಬ್ಲಾಕ್ ಅಧ್ಯಕ್ಷತೆಯ ವಿಷಯ ಪರಿಹರಿಸುವುದು ವರಿಷ್ಟರಿಗೆ ಕಬ್ಬಿಣದ ಕಡಲೆಯಂತಾಗಿತ್ತು.
ಸ್ಥಳಿಯ ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಹಲವು ಸುತ್ತಿನ ಸಭೆಗಳು ನಡೆದು, ಹಲವು ಬಾರಿ ಬೆಂಗಳೂರು ಮಟ್ಟದಲ್ಲಿ ಚರ್ಚೆಗಳು ನಡೆದಿದ್ದರೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿರಲಿಲ್ಲ.
ಆದರೆ ಜನವರಿ 10 ರಂದು ಮಂಗಳೂರಿಗೆ ಆಗಮಿಸಿದ ಕೆ.ಪಿ.ಸಿ.ಸಿ.ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಸುಳ್ಯದ ಸಮಸ್ಯೆಗೆ ಇತಿಶ್ರೀ ಹಾಡಲೇಬೇಕೆಂದು ತೀರ್ಮಾನಿಸಿದ್ದಾಗಿ ತಿಳಿದು ಬಂದಿದೆ.

ರಾಧಾಕೃಷ್ಣ ಬೊಳ್ಳೂರು ಅವರು ಅಧ್ಯಕ್ಷರೆಂದು ಘೋಷಣೆ ಆಗಿ ಕೆಲವೇ ದಿನಗಳಲ್ಲಿ ಹಿರಿಯ ನಾಯಕರನ್ನು ಕಡೆಗಣಿಸಲಾಯಿತು ಎನ್ನುವ ಕಾರಣಕ್ಕೆ ದೂರು ಹೋಗಿದ್ದರಿಂದ .ಕೂಡಲೇ ಡಿ.ಕೆ. ಶಿವಕುಮಾರ್ ಆ ಆದೇಶವನ್ನು ತಡೆಹಿಡಿದಿದ್ದರು. ನಂತರ ಸುಳ್ಯದ ಪ್ರಮುಖ ನಾಯಕರ ಸಭೆ ನಡೆದು ಹಿರಿಯ ನಾಯಕರ ತಂಡ ಶ್ರೀ ಸೋಮಶೇಖರ್ ಕೊಯಿಂಗಾಜೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಪ್ರಯತ್ನಿಸಲಾಯಿತು. ಅದಕ್ಕಾಗಿ ಮಂಗಳೂರಿನಲ್ಲಿ ಉಸ್ತುವಾರಿಗಳ ಸಮ್ಮುಖದಲ್ಲಿ ಅಭಿಪ್ರಾಯ ಸಂಗ್ರಹ ನಡೆದಿದ್ದರೂ ಹೈಕಮಾಂಡ್ ನಿರ್ದೇಶಿಸಿದ್ದ ನಿಯಮಗಳನ್ನು ಮೀರಿ ಅಭಿಪ್ರಾಯ ಸಂಗ್ರಹಗೊಂಡಿತ್ತೆಂದೂ ಮತ್ತೆ ಸ್ಥಳೀಯ ಮಟ್ಟದಲ್ಲಿ ಅಭಿಪ್ರಾಯ ಸಂಗ್ರಹ ಆಗಬೇಕೆಂದು ಡಿ.ಕೆ. ಶಿವಕುಮಾರ್ ಅವರು ಆದೇಶಿಸಿದ್ದರಿಂದ ಸುಳ್ಯದಲ್ಲಿ ಪುತ್ತೂರು ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಮತ್ತು ಮಮತಾ ಗಟ್ಟಿ, ಡಿಸಿಸಿ ಅಧ್ಯಕ್ಷರಾದ ಹರೀಶ್ ಕುಮಾರ್, ಕೆ.ಪಿ.ಸಿ.ಸಿ ಉಪಾಧ್ಯಕ್ಷರಾದ ನಾರಾಯಣ ಸ್ವಾಮಿ ಆದಿಯಾದ ನಾಯಕರ ಸಮ್ಮುಖದಲ್ಲಿ ಅಭಿಪ್ರಾಯ ಸಂಗ್ರಹ ನಡೆಯಿತು. ಆದರೆ ಆ ಅಭಿಪ್ರಾಯ ಸಂಗ್ರಹವೂ ಕೂಡಾ ಪಕ್ಷದ ನಾಕರು ಮತ್ತು ಕಾರ್ಯಕರ್ತರಿಂದ ಮಾತ್ರ ಅಭಿಪ್ರಾಯ ಸಂಗ್ರಹಿಸಬೇಕು ಎನ್ನುವ ನಿಯಮವನ್ನು ಪಾಲಿಸದೆ ಪಕ್ಷದ ಸದಸ್ಯರೇ ಅಲ್ಲದವರಿಂದಲೂ ಬಿಜೆಪಿ ಪಕ್ಷದಲ್ಲಿದ್ದವರಿಂದಲೂ ಅಭಿಪ್ರಾಯ ಸಂಗ್ರಹಗೊಂಡಿದೆ ಎಂದು ಡಿ.ಕೆ. ಶಿವಕುಮಾರ್ ಅವರಿಗೆ ದೂರು ಹೋಗಿತ್ತು.

ನಂತರ ನಡೆದ ಬೆಳವಣಿಗೆಯಲ್ಲಿ ಈ ಗೊಂದಲಗಳ ಕಾರಣಕ್ಕೆ ನಾನು ಆಸಕ್ತಿಯುಳ್ಳವನಲ್ಲ ಎಂದು ಸೋಮಶೇಖರ್ ಕೊಯಿಂಗಾಜೆ ಕಣದಿಂದ ಹಿಂದೆ ಸರಿದು ಮೂರನೇಯ ವ್ಯಕ್ತಿಯಾಗಿ ಹಿರಿಯ ನಾಯಕ ದನಂಜಯ ಅಡ್ಪಂಗಾಯರನ್ನು ಅಧ್ಯಕ್ಷರನ್ನಾಗಿ ಮಾಡಲು ಪ್ರಯತ್ನ ನಡೆಯಿತು ಎಂದು ತಿಳಿದು ಬಂದಿದೆ. ಈ ಮಧ್ಯೆ ಮುಂದಿನ ಬದಲಾವಣೆ ವರೆಗೆ ಪ್ರಸ್ತುತ ಅಧ್ಯಕ್ಷರಾಗಿದ್ದ ಶ್ರೀ ಪಿ.ಸಿ.ಜಯರಾಮ ರವರನ್ನು ಮುಂದುವರೆಸಲಾಗಿತ್ತು. ಇದೀಗ ನಿನ್ನೆ ಮಂಗಳೂರಿನಲ್ಲಿ ಖುದ್ದು ಡಿ.ಕೆ.ಶಿ.ಯವರ ನೇತೃತ್ವದಲ್ಲಿ ಸಭೆ ನಡೆದು ಪರವಿರೋಧಗಳನ್ನು ಆಲಿಸಿದ ಅವರು ಸುಳ್ಯದಲ್ಲಿ ಕಾಂಗ್ರೆಸ್ ಗೆಲುವಿಗೆ ಪೂರಕ ವಾತಾವರಣವಿದೆ. ನಾನು ಸರ್ವೇ ಮಾಡಿಸಿದ ಪ್ರಕಾರ ಸುಳ್ಯ ವಿದಾನಸಭಾ ಕ್ಷೇತ್ರ ಕಾಂಗ್ರೆಸ್ ಗೆಲ್ಲುವ ಕ್ಷೇತ್ರಗಳಲ್ಲಿ ಒಂದಾಗಿ ಕಂಡುಬಂದಿದೆ ಆದ್ದರಿಂದ ಬಣಗಳನ್ನು ಬಿಟ್ಟು ಎಲ್ಲರೂ ಒಗ್ಗಟ್ಟಾಗಿ ಮುಂದೆ ಹೋಗಲೇಬೇಕು, ಒಬ್ಬೊಬ್ಬರಿಂದ ಪಕ್ಷ ಕಟ್ಟಲು ಸಾದ್ಯವಿಲ್ಲ, ಸಮಸ್ಯೆ ಪರಿಹರಿಸುವ ದೃಷ್ಟಿಯಿಂದ ಒಬ್ಬರನ್ನು ಅಧ್ಯಕ್ಷರನ್ನು ಹಾಗೂ ಮತ್ತೊಬ್ಬರನ್ನು ಕಾರ್ಯಾಧ್ಯಕರನ್ನಾಗಿ ಮಾಡಿ ಸಮಸ್ಯೆಗೆ ಇತಿಶ್ರೀ ಹಾಡುವುದು ಎಂದು ತಿಳಿದು ಬಂದಿದೆ .
ಇದೀಗ ಅಧ್ಯಕ್ಷತೆ ಯಾರಿಗೆ ಕಾರ್ಯಾಧ್ಯಕ್ಷತೆ ಯಾರಿಗೆ ಒಲಿದು ಬರಲಿದೆ ಎನ್ನುವ ಕುತೂಹಲ ಕಾರ್ಯಕರ್ತರಲ್ಲಿ ನಿರ್ಮಾಣವಾಗಿದೆ. ಮುಂದೆ ಗುಂಪುಗಾರಿಕೆಯೆಲ್ಲವನ್ನೂ ಬಿಟ್ಟು ಒಗ್ಗಟ್ಟಾಗಿ ಪಕ್ಷ ಕಟ್ಟಬೇಕು ಎನ್ನುವ ಆಶಯ ಕಾರ್ಯಕರ್ತರಲ್ಲಿ ಸೃಷ್ಟಿಯಾಗಿದ್ದು, ಕಳೆದ ಹದಿನೈದು ತಿಂಗಳುಗಳಿಂದ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಕಾರ್ಯಕರ್ತರಲ್ಲಿ ನಿರಾಳತೆ ಸೃಷ್ಟಿಯಾಗಿದೆ ಎಂದು ತಿಳಿದುಬಂದಿದೆ. ಇದೀಗ ಎಲ್ಲರ ಚಿತ್ತ ಡಿ.ಕೆ. ಶಿವಕುಮಾರ್ ಅವರತ್ತ ನೆಟ್ಟಿದೆ. ತೀರ್ಪು ಏನಿರಬಹುದು ಎನ್ನುವುದು ಕುತೂಹಲ ಕಾರ್ಯಕರ್ತರಲ್ಲಿ ಮನೆಮಾಡಿದೆ.

Leave a Reply

Your email address will not be published. Required fields are marked *