ಸಂಪಾಜೆ ದೊಡ್ಡಡ್ಕದ ಬಳಿ : ಮಧ್ಯರಾತ್ರಿ ರಾಷ್ಟ್ರೀಯ ಹೆದ್ದಾರಿಗೆ ಮರ ಬಿದ್ದು ಸಂಚಾರ ಅಸ್ತವ್ಯಸ್ತ – ತಕ್ಷಣದ ಕಾರ್ಯಾಚರಣೆಯಿಂದ ಸುಗಮ ಸಂಚಾರಕ್ಕೆ ವ್ಯವಸ್ತೆ.
ಜ 8:ಸುಳ್ಯ ಸಂಪಾಜೆಯ ದೊಡ್ಡಡ್ಕದ ಕೊರಗಜ್ಜ ದೇವಸ್ಥಾನದ ಬಳಿ ಮಧ್ಯರಾತ್ರಿ ಸುಮಾರು 2 ಗಂಟೆಯ ವೇಳೆಗೆ ರಾಷ್ಟ್ರೀಯ ಹೆದ್ದಾರಿ 275 ಕ್ಕೆ ಭಾರೀ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ವಾಹನ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಯಿತು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಕಲ್ಲುಗುಂಡಿಯ ಹೊರಠಾಣೆಯ ಪೊಲೀಸ್ ಅಧಿಕಾರಿಗಳು, ಅರಣ್ಯ ಇಲಾಖೆ ಸುಳ್ಯ ಹಾಗೂ ಕಲ್ಲುಗುಂಡಿಯ ಅಧಿಕಾರಿಗಳು ಮತ್ತು ಸುಳ್ಯ ಪೊಲೀಸ್ ಇಲಾಖೆಯ 112 ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.

ಸಂಚಾರ ಪುನರ್ ಸ್ಥಾಪನೆಗೆ ಕಲ್ಲುಗುಂಡಿ–ಸಂಪಾಜೆ ಸ್ಥಳೀಯ ಪಂಚಾಯತ್ ಸದಸ್ಯರುಗಳು ಅಟೋಚಾಲಕರುಗಳು ಸಕ್ರಿಯವಾಗಿ ಭಾಗವಹಿಸಿ ಸಹಕರಿಸಿದರು. ಇವರೆಲ್ಲರ ಸಹಾಯದಿಂದ ಮರವನ್ನು ಶೀಘ್ರವಾಗಿ ತೆರವುಗೊಳಿಸಲಾಯಿತು.
ಸಂಬಂಧಪಟ್ಟ ಇಲಾಖೆಗಳ ಸಮನ್ವಯ ಹಾಗೂ ಸ್ಥಳೀಯರ ಸಾಮಾಜಿಕ ಹೊಣೆಗಾರಿಕೆಯ ಪರಿಣಾಮವಾಗಿ ಕಡಿಮೆ ಸಮಯದಲ್ಲೇ ರಸ್ತೆ ತೆರವುಗೊಳಿಸಿ ವಾಹನ ಸಂಚಾರವನ್ನು ಸುಗಮಗೊಳಿಸಲಾಯಿತೆಂದು ತಿಳಿದು ಬಂದಿದೆ. ಸಾರ್ವಜನಿಕರ ಸುರಕ್ಷತೆ ಹಾಗೂ ಸಂಚಾರ ವ್ಯವಸ್ಥೆಯನ್ನು ಕಾಪಾಡುವಲ್ಲಿ ಎಲ್ಲರ ಸಹಕಾರ ಶ್ಲಾಘನೀಯ ಕಾರ್ಯವಾಗಿದೆ.

