ಸುಳ್ಯ ಜಾತ್ರೆ : ಅಮ್ಯೂಸ್ ಮೆಂಟ್ ಪಾರ್ಕ್ ಜಾಗ ರೂ.13 ಲಕ್ಷದ 1 ಸಾವಿರಕ್ಕೆ ಏಲಂ!
ಸಂತೆ ಜಾಗ ಮೂರು ಮೀಟರಿಗೆ 5 ರಿಂದ 40 ಸಾವಿರದವರೆಗೆ ಹರಾಜು

ಸುಳ್ಯ: ಸುಳ್ಯ ಜಾತ್ರೋತ್ಸವ ಪ್ರಯುಕ್ತ ಸಂತೆ ಜಾಗದ ಏಲಂ ಜ.6ರಂದು ಬೆಳಗ್ಗಿನಿಂದ ಸಂಜೆಯವರೆಗೆ ನಡೆಯಿತು.
ಈ ಬಾರೀ ದೇವಸ್ಥಾನದ ಪಕ್ಕದಲ್ಲಿರುವ ಅಮ್ಯೂಸ್ ಮೆಂಟ್ ಪಾರ್ಕ್ (ತೊಟ್ಟಿಲು) ಇರುವ ಜಾಗ 13 ಲಕ್ಷದ 1 ಸಾವಿರಕ್ಕೆ ಹರಾಜಾಗಿದೆ.
ದೇವಸ್ಥಾನದ ಎದುರಿನಿಂದ ರಸ್ತೆಯ ಎರಡೂ ಬದಿಯಲ್ಲಿಯೂ ಜಾತ್ರೆ ಸಂತೆ ಅಂಗಡಿಗಳನ್ನು ಹಾಕಲಾಗುತಿದ್ದು ಸುಮಾರು 110 ಕ್ಕೂ ಹೆಚ್ಚು ಅಂಗಡಿಗಳಿಗೆ ಜಾಗ ಗುರುತಿಸಲಾಗಿದೆ. ಒಂದು ಅಂಗಡಿಗೆ ಮೂರು ಮೀಟರ್ ನಂತೆ ಜಾಗ ಗುರುತಿಸಲಾಗಿದ್ದು ಮೂರು ಸಾವಿರದಿಂದ ಬಿಡ್ಡಿಂಗ್ ಆರಂಭಗೊಂಡಿದೆ. ಬೆಳಗ್ಗೆ ಏಲಂ ಆರಂಭದ ಸಂದರ್ಭ ದೇವಸ್ಥಾನದ ಎಡಬದಿಯಿಂದ ಬಿಡ್ಡಿಂಗ್ ಮಾಡಲಾಯಿತು. ದೇವಸ್ಥಾನದವರು ಮೂರು ಮೀಟರ್ ಜಾಗಕ್ಕೆ 3 ಸಾವಿರದಿಂದ ಏಲಂ ಮಾಡಿದಾಗ ಅದು ಏರುತ್ತಾ ಹೋಗುತಿತ್ತು. ಆರಂಭದಲ್ಲಿ 5 ಸಾವಿರ 7 ಸಾವಿರ ಏರುತ್ತಾ ಹೋದ ಜಾಗ ರಥ ಬೀದಿ ರಿಕ್ಷಾ ನಿಲ್ದಾಣ ಬಳಿ ಬರುವಾಗ 10 ಸಾವಿರ 15 ಸಾವಿರಕ್ಕೆ ಮೂರು ಮೀಟರ್ ಜಾಗ ಏಲಂ ಆಯಿತು. ಮಧ್ಯಾಹ್ನ ನಂತರ ರೋಟರಿ ಶಾಲಾ ಪಕ್ಕದ ಜಾಗ ಸಂತೆ ಅಂಗಡಿಗಾಗಿ ಏಲಂ ಆಯಿತು.

ಅಮ್ಯೂಸ್ ಮೆಂಟ್ ಪಾರ್ಕ್ ಗೆ ಹೋಗುವ ದಾರಿಯ ಪಕ್ಕದ ಎರಡೂ ಬದಿಯಲ್ಲಿಯೂ ಮೂರು ಮೀಟರ್ ಗೆ 35 ಸಾವಿರ ಹಾಗೂ ಇನ್ನೊಂದು ಬದಿ ಮೂರು ಮೀಟರ್ ಜಾಗಕ್ಕೆ 40 ಸಾವಿರದ 500 ಕ್ಕೆ ಏಲಂ ಆಯಿತು. ಇದು ಈ ವರ್ಷ ಅತೀ ಹೆಚ್ಚು ಏಲಂ ಆದ ಜಾಗದ ಮೌಲ್ಯ. ಬೆಳಗ್ಗೆಯಿಂದ ಸಂಜೆ ತನಕ ನಡೆದ ಏಲಂ ನಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.

ಆಕ್ಷೇಪ : ಏಲಂ ಸಂದರ್ಭದಲ್ಲಿ ಯಾರ ಹೆಸರಲ್ಲಿ ದೇವಸ್ಥಾನಕ್ಕೆ ಇ.ಎಂ.ಡಿ. ಪಾವತಿಸಲಾಗಿತ್ತೋ ಅವರು ಏಲಂ ನಲ್ಲಿ ಭಾಗವಹಿಸದೇ ಅವರ ಪರವಾಗಿ ಇತರರು ಏಲಂ ನಲ್ಲಿ ಭಾಗವಹಿಸುತ್ತಿದ್ದುದಕ್ಕೆ ಆಕ್ಷೇಪ ವ್ಯಕ್ತವಾಯಿತು. ಈ ಆಕ್ಷೇಪದ ಹಿನ್ನಲೆಯಲ್ಲಿ ಇ.ಎಂ.ಡಿ. ಪಾವತಿಸಿದವರು ಆಧಾರ್ ಕಾರ್ಡ್ ಜತೆ ಸ್ಥಳದಲ್ಲಿರಬೇಕೆಂಬ ಸೂಚನೆ ನೀಡಿದ ಬಳಿಕ ಅದೇ ರೀತಿ ಮುಂದುವರಿಯಿತು.

