ವೆನೆಜುವೆಲಾದ ಮೇಲೆ ಆಕ್ರಮಣ ಕುರಿತಂತೆ ಬಿಜೆಪಿ ಸರ್ಕಾರದ ಅಂಜುಬುರುಕ, ಮತ್ತು ಅಪಮಾನಕರ ನಿಲುವು-ಸಿಪಿಐ(ಎಂ) ಪೊಲಿಟ್ಬ್ಯುರೊ ಖಂಡನೆ
ವೆನೆಜುವೆಲಾದ ವಿರುದ್ಧದ ದುರಾಕ್ರಮಣ ಮತ್ತು ಅಮೆರಿಕದ ಸಶಸ್ತ್ರ ಪಡೆಗಳು ಅದರ ಅಧ್ಯಕ್ಷರು ಮತ್ತು ಅವರ ಪತ್ನಿಯನ್ನು ಅಪಹರಿಸಿದ್ದಕ್ಕೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಅಂಜುಬುರುಕತನದ ಪ್ರತಿಕ್ರಿಯೆ ಭಾರತವು ಇತರ ರಾಷ್ಟ್ರಗಳ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವದ ರಕ್ಷಣೆಯ ಬಗ್ಗೆ ದೀರ್ಘಕಾಲದಿಂದ ತಳೆದುಕೊಂಡು ಬಂದಿರುವ ನಿಲುವಿಗೆ ತಕ್ಕುದಾಗಿಲ್ಲ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಆಕ್ರೋಶ ವ್ಯಕ್ತಪಡಿಸಿದೆ.

ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯು ‘ವೆನೆಜ್ಯುವೆಲಾದ ಬೆಳವಣಿಗೆಗಳ ಬಗ್ಗೆ ‘ಆಳವಾದ ಕಳವಳ’ವನ್ನು ಮಾತ್ರ ವ್ಯಕ್ತಪಡಿಸುತ್ತದೆ ಮತ್ತು ‘ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಖಚಿತಪಡಿಸಲು ಸಂವಾದ’ಕ್ಕೆ ಕರೆ ನೀಡುತ್ತದೆ.
ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಅಂತರರಾಷ್ಟ್ರೀಯ ಕಾನೂನಿನ ಸಂಪೂರ್ಣ ಉಲ್ಲಂಘನೆಯ ಬಗ್ಗೆ ಒಂದೇ ಒಂದು ಖಂಡನೆಯ ಪದವೂ ಇಲ್ಲ ಎಂದು ಪೊಲಿಟ್ಬ್ಯುರೊ ಹೇಳಿದೆ.
ಯುನೈಟೆಡ್ ಅಮೇರಿಕಾದ ಕೆಲವು ಯುರೋಪಿಯನ್ ಮಿತ್ರರಾಷ್ಟ್ರಗಳೂ ಸಹ ಇಂತಹ ಮಾತುಗಳನ್ನು ಹೇಳಿವೆ ಎಂಬ ಸಂಗತಿಯತ್ತ ಅದು ಗಮನ ಸೆಳೆದಿದೆ.
ಭಾರತದ ನಿಲುವು ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಂತಹ ಬ್ರಿಕ್ಸ್ ಪಾಲುದಾರರು ತೆಗೆದುಕೊಂಡ ನಿಲುವಿಗೆ ತದ್ವಿರುದ್ಧವಾಗಿದೆ, ಅವರು ಅಮೆರಿಕದ ಆಕ್ರಮಣವನ್ನು ನಿಸ್ಸಂದಿಗ್ಧವಾಗಿ ಮತ್ತು ಬಲವಾಗಿ ಖಂಡಿಸಿದ್ದಾರೆ ಮತ್ತು ಅಧ್ಯಕ್ಷ ಮಡುರೊ ಮತ್ತು ಅವರ ಪತ್ನಿಯನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಈ ಅಮೇರಿಕಾ ಪರ ನಿಲುವು ಮೋದಿ ಸರ್ಕಾರದ ಬಲಪಂಥೀಯ ಸಿದ್ಧಾಂತ ಮತ್ತು ಟ್ರಂಪ್ ಆಡಳಿತದೊಂದಿಗೆ ಅದು ಹೊಂದಿರುವ ರಣತಂತ್ರದ ಸಂಬಂಧಗಳಿಗೆ ಅನುಗುಣವಾಗಿದೆ.
ಈ ನಿಲುವಿನಿಂದಾಗಿ ಭಾರತವು ಜಾಗತಿಕ ದಕ್ಷಿಣದ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಯಾವುದೇ ದಾವೆಯನ್ನು ಕೈಬಿಟ್ಟಂತಾಗಿದೆ ಎಂದಿರುವ ಸಿಪಿಐ(ಎಂ) ಪೊಲಿಟ್ಬ್ಯುರೊ, ಮೋದಿ ಸರ್ಕಾರ ಈ ಅಪಮಾನಕರ ನಿಲುವನ್ನು ಕೈಬಿಡಬೇಕು ಮತ್ತು ವೆನೆಜುವೆಲಾದಲ್ಲಿ ಅಮೆರಿಕದ ಆಕ್ರಮಣ ಹಾಗೂ ಕಾನೂನುಬಾಹಿರ ಕೃತ್ಯಗಳ ವಿರುದ್ಧ ಸ್ಪಷ್ಟವಾಗಿ ಮಾತನಾಡಬೇಕು ಎಂದು ಆಗ್ರಹಿಸಿದೆ

