75 ವರ್ಷಗಳ ನಂತರ ಬಿಜೆಪಿ ನಾಯಕರು ರಾಜೀನಾಮೆ ನೀಡಬೇಕೇ: ಪತ್ರಕರ್ತರ ಪ್ರಶ್ನೆಗೆ ಗರಂ ಆದ ಅಮಿತ್ ಶಾ
ಪಶ್ಚಿಮ ಬಂಗಾಳ : 75 ವರ್ಷಗಳ ನಂತರ ಬಿಜೆಪಿ ನಾಯಕರು ರಾಜೀನಾಮೆ ನೀಡಬೇಕೇ ಎಂಬ ಪತ್ರಕರ್ತರ ಪ್ರಶ್ನೆಗೆ ‘ನನ್ನ ಪಕ್ಷದ ಬಗ್ಗೆ ನೀವು ಚಿಂತಿಸಬೇಡಿ’ ಎಂದು ಮಾಧ್ಯಮದವರ ವಿರುದ್ಧ ಅಮಿತ್ ಶಾ ಗರಂ ಆಗಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮಾಧ್ಯಮ ಸಂವಾದದ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು, 75 ವರ್ಷ ತುಂಬಿದ ನಂತರ ಬಿಜೆಪಿ ನಾಯಕರು ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಬೇಕೇ ಎಂದು ಕೇಳಲಾಯಿತು.

ಈ ವೇಳೆ ಅಮಿತ್ ಶಾ ಸಿಟ್ಟುಗೊಂಡಿದ್ದಾರೆ. ನೀವು ಬಂಗಾಳದ ಬಗ್ಗೆ ಚಿಂತಿಸಬೇಕು ನನ್ನ ಬಗ್ಗೆ ಅಲ್ಲ ಎಂದು ಗರಂ ಆಗಿ ಉತ್ತರಿಸಿದ್ದಾರೆ.
75 ವರ್ಷ ದಾಟಿದ ನಾಯಕರನ್ನು ಸಕ್ರಿಯ ರಾಜಕಾರಣದಿಂದ ದೂರ ಇರಿಸುವ ಪರಿಪಾಟವು ಬಿಜೆಪಿಯಲ್ಲಿ ಇದೆ. 75 ವರ್ಷ ತುಂಬಿದ ಮೇಲೆ ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗಬೇಕು ಎಂಬಂಥ ನಿಯಮ ಇದೆ ಎಂಬುದನ್ನು ಬಿಜೆಪಿ ನೇರವಾಗಿ ಎಲ್ಲಿಯೂ ಹೇಳಿಲ್ಲ. ಆದರೆ, 2014ರ ಬಳಿಕ ಬಿಜೆಪಿಯು ಇಂಥದ್ದೊಂದು ಮಂಡಳಿಯನ್ನು ಸ್ಥಾಪಿಸಿದೆ.
ಹಿರಿಯರು ತಮ್ಮ ಅಗಾಧ ಅನುಭವದಿಂದ ಸರ್ಕಾರಕ್ಕೆ, ನಾಯಕತ್ವಕ್ಕೆ ಮಾರ್ಗದರ್ಶನ ನೀಡಬೇಕು ಎಂಬ ಕಾರಣಕ್ಕಾಗಿ ಈ ಮಂಡಳಿಯನ್ನು ಸ್ಥಾಪಿಸಲಾಗಿದೆ ಎಂದು ಬಿಜೆಪಿ ಆಗ ಹೇಳಿಕೊಂಡಿತ್ತು.
ಕೆಲವೇ ಬಾರಿ ಈ ಮಂಡಳಿಯು ಸರ್ಕಾರ ನಡೆಸುವವರಿಗೆ ಮಾರ್ಗದರ್ಶನ ಮಾಡುವ ಪ್ರಯತ್ನ ಮಾಡಿತ್ತು. 2015ರ ಬಿಹಾರ ಚುನಾವಣೆ ಸೋಲಿನ ಬಳಿಕ, ಪತ್ರಿಕಾ ಪ್ರಕಟಣೆಯನ್ನೂ ಹೊರಡಿಸಿತ್ತು. ಆದರೆ, ಅಧಿಕಾರಸ್ಥರು ಹಿರಿಯರ ಮಾರ್ಗದರ್ಶನವನ್ನು ನಂತರ ತಣ್ಣಗೇ ತಳ್ಳಿ ಹಾಕಿದ್ದರು. ಅಲ್ಲಿಂದೀಚೆಗೆ ಯಾವ ಮಾರ್ಗದರ್ಶನವನ್ನೂ ಈ ಮಂಡಳಿ ನೀಡಿಲ್ಲ. ಮಂಡಳಿಯ ಸಭೆ ನಡೆದ ಬಗ್ಗೆ ವರದಿಗಳಿಲ್ಲ.
ಗುಜರಾತ್ ಮುಖ್ಯಮಂತ್ರಿಯಾಗಿದ್ದ ಆನಂದಿಬೆನ್ ಪಟೇಲ್ ಅವರು ತಮಗೆ 75 ತುಂಬುವುದಕ್ಕೆ ಮೊದಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 75 ವರ್ಷ ತುಂಬಿದವರು ನಿವೃತ್ತರಾಗಬೇಕು ಎಂಬ ಪಕ್ಷದ ನಿಯಮದ ಕಾರಣ ನೀಡಿಯೇ ಅವರು ರಾಜೀನಾಮೆ ನೀಡಿದ್ದರು. ಹಿರಿಯ ನಾಯಕ ಯಶವಂತ್ ಸಿನ್ಹಾ ಅವರು ಈ ಅಲಿಖಿತ ನಿಯಮವನ್ನು ಬಹಿರಂಗವಾಗಿಯೇ ಟೀಕಿಸಿದ್ದರು ಕೂಡ.
ಅಂದು ‘ಅಡ್ವಾಣಿ, ಮುರಳಿ ಮನೋಹರ ಜೋಷಿ ಸೇರಿದಂತೆ 75 ವರ್ಷ ತುಂಬಿದ ಹಿರಿಯರು ಚುನಾವಣೆಯಲ್ಲಿ ಸ್ಪರ್ಧಿಸದಂತೆ, ಅವರನ್ನು ಮೂಲೆಗುಂಪು ಮಾಡಲು ‘ಅವರು’ ಇಂಥ ನಿಯಮವೊಂದನ್ನು ಮಾಡಿದ್ದಾರೆ’ ಎಂದು ಅಂದು ಟೀಕೆಗಳು ಹುಟ್ಟಿಕೊಂಡಿದ್ದವು.
2014ರಿಂದ ಈಚೆಗೆ ಇದೇ ನಿಯಮದ ಕಾರಣಕ್ಕಾಗಿ, ಬಿಜೆಪಿ ಸರ್ಕಾರವಿದ್ದ ಹಲವು ರಾಜ್ಯಗಳಲ್ಲಿಯೂ ಕೇಂದ್ರ ಸರ್ಕಾರದಲ್ಲಿಯೂ ಸಚಿವ ಸ್ಥಾನದಲ್ಲಿದ್ದ 75 ವರ್ಷ ತುಂಬಿದ ನಾಯಕರು ಸ್ಥಾನ ತ್ಯಜಿಸಿದ್ದರು.
2019ರಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಗಿದ್ದ ಅಮಿತ್ ಶಾ ಅವರು ‘ದಿ ವೀಕ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, ’75 ವರ್ಷ ಮೇಲ್ಪಟ್ಟ ಯಾರಿಗೂ ಈ ಬಾರಿ ಟಿಕೆಟ್ ನೀಡಲಾಗಿಲ್ಲ. ಇದು ಪಕ್ಷದ ನಿರ್ಧಾರ’ ಎಂದಿದ್ದರು. ಆದರೆ ಈಗ ತಮ್ಮ ನಿಲುವು ಮತ್ತು ಹೇಳಿಕೆ ತಮಗೇ ತಿರುಗುಬಾಣವಾಗುತ್ತಿದೆ.
