ಕರಾವಳಿ ಭಾಗಕ್ಕೆ ಸರಿಹೊಂದುವ ಪ್ರತ್ಯೇಕ ಪ್ರವಾಸೋದ್ಯಮ ನೀತಿ: ಡಿಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ
ಪ್ರಜಾವಾರ್ತೆ; ಜ.10
ಶನಿವಾರ ಮಂಗಳೂರಿನಲ್ಲಿ ನಡೆದ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶದಲ್ಲಿ ಮಾತನಾಡಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೂಡಿಕೆದಾರರು ಮತ್ತು ಸ್ಥಳೀಯ ಪ್ರತಿನಿಧಿಗಳ ಸಲಹೆಗಳನ್ನು ಪಡೆದು ಮುಂದಿನ ದಿನ ಕರಾವಳಿ ಜಿಲ್ಲೆಗಳಿಗೆ ಸರಿಹೊಂದುವ ವಿಶೇಷ ಪ್ರತ್ಯೇಕ ಪ್ರವಾಸೋದ್ಯಮ ನೀತಿಯನ್ನು ರೂಪಿಸುವುದಾಗಿ ಹೇಳಿದರು.
ಗೋವಾ ಮತ್ತು ಕೇರಳ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕವು ಪ್ರವಾಸೋದ್ಯಮ ಪ್ರಚಾರದಲ್ಲಿ ಹಿಂದೆ ಬಿದ್ದಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ 300 ಕಿಲೋಮೀಟರ್ಗಿಂತಲೂ ಹೆಚ್ಚು ಉದ್ದದ ವಿಫುಲವಾದ ಕರಾವಳಿಯನ್ನು ಹೊಂದಿದ್ದರೂ, ಅದರ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲು ಈವರೆಗೂ ನಮಗೆ ಸಾಧ್ಯವಾಗಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜನರು ಮಂಗಳೂರನ್ನು ಬಿಟ್ಟು ಉದ್ಯೋಗಕ್ಕಾಗಿ ಸೌದಿ ಅರೇಬಿಯಾ ಮತ್ತು ಬೆಂಗಳೂರಿನಂತಹ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಈ ಭಾಗದಲ್ಲಿ ಒಂದೇ ಒಂದು ಪಂಚತಾರಾ ಹೋಟೆಲ್ ಆಗಲಿ ಅಥವಾ ಸರಿಯಾಗಿ ಅಭಿವೃದ್ಧಿ ಹೊಂದಿದ ಪ್ರವಾಸಿ ತಾಣವಾಗಲಿ ಇಲ್ಲದಿರುವುದು ಅಭಿವೃದ್ಧಿಯ ಕೊರತೆಯನ್ನು ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದರು.
ಇತ್ತೀಚೆಗೆ ಸಚಿವ ಸಂಪುಟದ ಮುಂದೆ ಒಂದು ಸಾಮಾನ್ಯ ಪ್ರವಾಸೋದ್ಯಮ ನೀತಿಯ ಸಬ್ಜೆಕ್ಟ್ ಮಂಡಿಸಲಾಗಿತ್ತು. ಇದು ಕರಾವಳಿ ಭಾಗದ ಅಗತ್ಯಗಳಿಗೆ ಪೂರಕವಾಗಿಲ್ಲ ಎಂದು ತಾವು ಅಧಿಕಾರಿಗಳಿಗೆ ತಿಳಿಸಿರುವುದಾಗಿ ಡಿ.ಕೆ. ಶಿವಕುಮಾರ್ ಹೇಳಿದರು.
ಕೇವಲ ಅಧಿಕಾರಿಗಳ ತಂಡ ಈ ನೀತಿಯನ್ನು ರೂಪಿಸುವ ಬದಲಿಗೆ, ಸ್ಥಳೀಯ ಶಾಸಕರು ಮತ್ತು ಉದ್ಯಮಿಗಳ ಅಭಿಪ್ರಾಯಗಳನ್ನು ಒಳಗೊಂಡ ಹೊಸ ನೀತಿ ಅಗತ್ಯವಿದೆ. ಕರಾವಳಿ ಅಭಿವೃದ್ಧಿಗೆ ವಿಶೇಷ ಗಮನ ನೀಡುವುದಾಗಿ ನಾವು ಚುನಾವಣಾ ಪ್ರಣಾಳಿಕೆಯಲ್ಲೂ ಭರವಸೆ ನೀಡಿದ್ದೆವು ಎಂದು ಅವರು ನೆನಪಿಸಿದರು.
ಗಲ್ಫ್ ರಾಷ್ಟ್ರಗಳು ಸೇರಿದಂತೆ ಮುಂಬೈ ಮತ್ತು ಬೆಂಗಳೂರಿನಲ್ಲಿ ನೆಲೆಸಿರುವ ಈ ಭಾಗದ ಅನೇಕ ಉದ್ಯಮಿಗಳು ಕರಾವಳಿಯಲ್ಲಿ ಹೂಡಿಕೆ ಮಾಡಲು ಉತ್ಸುಕರಾಗಿದ್ದಾರೆ. ಸರ್ಕಾರವು ಅಗತ್ಯ ಸಹಕಾರ ಮತ್ತು ಮೂಲಸೌಕರ್ಯಗಳನ್ನು ಒದಗಿಸಿದರೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ದೊಡ್ಡ ಯೋಜನೆಗಳನ್ನು ಜಾರಿಗೆ ತರಬಹುದು. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಭೌಗೋಳಿಕ ಪರಿಸ್ಥಿತಿಗೆ ಅನುಗುಣವಾಗಿ ಕಾನೂನು ಚೌಕಟ್ಟಿನೊಳಗೆ ಈ ಹೊಸ ನೀತಿಯನ್ನು ಕೂಡಲೇ ತಯಾರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

